ಅಬ್ದುಲ್ ಕಲಾಂ ರ `ಉತ್ತಮ ತಮಿಳುನಾಡು` ಕಲ್ಪನೆಯ ಸಾಕಾರಕ್ಕೆ ಯತ್ನಿಸುವೆ -ಕಮಲ್ ಹಾಸನ್
ಚೆನ್ನೈ: ಕಮಲ್ ಹಾಸನ್ ರಾಮನಾಥಪುರಂನಲ್ಲಿ ಎ.ಪಿ.ಜೆ. ಅಬ್ದುಲ್ ಕಲಾಮ್ ಅವರ ನಿವಾಸದಿಂದ ಫೆಬ್ರವರಿ 21 ರಿಂದ ತಮ್ಮ ತಮಿಳುನಾಡಿನ ರಾಜಕೀಯ ಪ್ರವಾಸಕ್ಕೆ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ.
ಕಲಾಮ್ ಅವರು ಕಂಡಿದ್ದ "ಉತ್ತಮ ತಮಿಳುನಾಡಿನ" ಕನಸನ್ನು ಜಾರಿಗೊಳಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದರು. ಕೆಲವು ವರ್ಷಗಳ ಹಿಂದೆ ವಿಮಾನದಲ್ಲಿ ಪ್ರಯಾಣಿಸುವಾಗ ಮಾಜಿ ರಾಷ್ಟ್ರಪತಿ ಅವರೊಂದಿಗಿನ ಸಂಭಾಷಣೆಯನ್ನು ಸ್ಮರಿಸಿಕೊಂಡಿರುವ ಹಾಸನ್ ಕಲಾಂರನ್ನು ಪ್ರಶಂಶಿಸಿದ್ದಾರೆ.
ಅಬ್ದುಲ್ ಕಲಾಮ್ ಜನಿಸಿದ ರಾಮನಾಥಪುರಂನ್ನು ನೆನಪಿಸಿಕೊಳ್ಳುತ್ತಾ, ಈ ಬಾರಿ ಸಮಯವನ್ನು ನಿಗದಿಪಡಿಸಿ ಭೇಟಿ ನೀಡುವ ಕುರಿತಾಗಿ ಪ್ರಸ್ತಾಪಿಸಿದ್ದಾರೆ. ಆ ಮೂಲಕ ತಮ್ಮ ರಾಜಕೀಯ ಜೀವನಕ್ಕೆ ಮುನ್ನಡೆಯಿಡುವ ಕನಸನ್ನು ಹೊಂದಿದ್ದಾರೆ ಎನ್ನಲಾಗಿದೆ. ಅಬ್ದುಲ್ ಕಲಾಂ ಉತ್ತಮ ತಮಿಳುನಾಡಿನ ಕನಸು ಹೊಂದಿದ್ದರು. ನಾನು ಕೂಡ ಅದೇ ಚಿಂತನೆಯನ್ನು ಹೊಂದಿದ್ದೇನೆ, ಆದ್ದರಿಂದ ಆ ಕಡೆಗೆ ಸಾಗುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಒಂದು ಕಡೆ ತನ್ನ ರಾಜಕೀಯ ಪ್ರವೇಶದ ರಾಜಕೀಯ ಸಂದರ್ಭದಲ್ಲಿ ರಜನಿಕಾಂತ್ ಅವರು ಆಧ್ಯಾತ್ಮಿಕ ರಾಜಕೀಯದ ಕುರಿತಾಗಿ ಮಾತನಾಡಿದ್ದರು. ಆದರೆ ಕಮಲ್ ಹಾಸನ್ ಅವರ ರಾಜಕೀಯ ಜಾತಿ, ಮತ ಮತ್ತು ಧರ್ಮ ಮೀರಿದ್ದು. ಉತ್ತಮ ಆಡಳಿತವೇ ಪ್ರಥಮ ಆಧ್ಯತೆ ಎಂದು ತಮಿಳು ಸಾಪ್ತಾಹಿಕ 'ಆನಂದ ವಿಕಾತನ್' ನ ತಮ್ಮ ಅಂಕಣದಲ್ಲಿ ಪ್ರಸ್ತಾಪಿಸಿದ್ದಾರೆ.