ಅಲೀಗಢ: ಮನೆಯಲ್ಲಿ ಮಗನಿಗೆ ಟ್ಯೂಷನ್ ಹೇಳಿಕೊಡಲು ನೇಮಿಸಿದ್ದ ಶಿಕ್ಷಕನೊಬ್ಬ ಆ ಬಾಲಕನಿಗೆ ಚಪ್ಪಲಿಯಿಂದ ಹೊಡೆದು, ಕೈ ಬೆರಳುಗಳನ್ನು ಕಚ್ಚಿದ ಅಮಾನುಷ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. 


COMMERCIAL BREAK
SCROLL TO CONTINUE READING

ಸುಮಾರು 6 ನಿಮಿಷಗಳ ಈ ವೀಡಿಯೋದಲ್ಲಿ ಆ ಶಿಕ್ಷಕ, ಬಾಲಕನ ಕೂದಲು ಹಿಡಿದು, ಚಪ್ಪಲಿಯಿಂದ ಹೊಡೆದಿದ್ದಲ್ಲದೇ, ಆತನ ಕಿವಿಯನ್ನು ಬಲವಾಗಿ ಹಿಂಡಿ ಹಿಂಸಿಸಿದ್ದಾನೆ. ಅಷ್ಟೇ ಅಲ್ಲದೆ, ಆ ಬಾಲಕನ ಬೆರಳುಗಳನ್ನು ಕಚ್ಚಿದ್ದು, ಆತ ನೋವಿನಿಂದ ಚೀರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೆ, ಆ ಶಿಕ್ಷಕ ಲೋಟ ಮತ್ತು ಕೀ ಚೇನ್ ಅನ್ನು ಆ ಬಾಲಕನಿಗೆ ಹೊಡೆಯಲು ಬಳಸಿದ್ದಾನೆ. ಇದರಿಂದ ತೀವ್ರ ನೋವು ಅನುಭವಿಸಿದ ಬಾಲಕ ಅಳಲು ಆರಂಭಿಸಿದ್ದಾನೆ. ನಂತರ ಆ ಬಾಲಕನಿಗೆ ಒಂದು ಲೋಟ ನೀರು ನೀಡಿ ಆತನಿಗೆ ನಗುವಂತೆ ಹೇಳಿದ್ದಾನೆ. 


ಈ ಅಮಾನುಷ ಘಟನೆ ಮನೆಯ ಕೊಠಡಿಯೊಳಗೆ ನಡೆದಿದ್ದರೂ, ಸಿಸಿಟಿವಿಯಲ್ಲಿ ಸೆರೆಯಾಗಿದೆ.  ತನ್ನ ವರ್ಕ್ ಶಾಪ್ ನಲ್ಲಿ ಕೆಟ್ಟು ಹೋಗಿದ್ದ ಸಿಸಿಟಿವಿ ಕ್ಯಾಮೆರಾವನ್ನು ಸರಿಪಡಿಸಿ ಮನೆಯಲ್ಲಿ ಟ್ಯೂಶನ್ ಕೋಣೆಯಲ್ಲಿ ಪರೀಕ್ಷಾರ್ಥವಾಗಿ ಅಳವಡಿಸಿದ್ದಾಗಿ ಬಾಲಕನ ತಂದೆ ಎಎನ್ಐ ಗೆ ಹೇಳಿದ್ದಾರೆ "ಆ ಟೀಚರ್ ನನ್ನ ಮಗನಿಗೆ ಹೊಡೆದಿರುವುದನ್ನು ನೋಡಿ ನನಗೆ ನಿಜಕ್ಕೂ ಆಘಾತವಾಯಿತು. ನನ್ನ ಮನೆಯಲ್ಲೇ ವರ್ಕ್ ಶಾಪ್ ಇರುವುದರಿಂದ ನನ್ನ ಮಗ ಅಷ್ಟೊಂದು ಅತ್ತರೂ ಯಾರಿಗೂ ಕೇಳಿಸಿಲ್ಲ" ಎಂದು ಬಾಲಕನ ತಂದೆ ಹೇಳಿದ್ದಾರೆ. 



ಘಟನೆ ಸಂಬಂಧ ಶಿಕ್ಷಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಸಿಟಿವಿ ಫೂಟೇಜ್ ಅನ್ನೂ ಸಹ ಬಾಲಕನ ತಂದೆ ನೀಡಿದ್ದಾರೆ. ಸದ್ಯ ಆರೋಪಿ ಶಿಕ್ಷಕ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಆಶುತೋಷ್ ದ್ವಿವೇದಿ ಹೇಳಿದ್ದಾರೆ. ಐಪಿಸಿ ಸೆಕ್ಷನ್ 307ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.