`ಬ್ರಾಹ್ಮಣಿಕಲ್ ಪ್ರಭುತ್ವ ನಾಶಪಡಿಸಿ` ಭಿತ್ತಿಪತ್ರ ಹಿಡಿದು ವಿವಾದಕ್ಕೆ ಸಿಲುಕಿದ ಟ್ವಿಟ್ಟರ್ ಸಿಇಓ
ಭಾರತದ ಪ್ರವಾಸದಲ್ಲಿರುವ ಟ್ವಿಟ್ಟರ್ ಸಿಇಓ ಜಾಕ್ ಡೋರ್ಸಿ ಈಗ ಬ್ರಾಹ್ಮಣಿಕಲ್ ಪ್ರಭುತ್ವ ನಾಶಪಡಿಸಿ ಎನ್ನುವ ಪೋಸ್ಟರ್ ಹಿಡಿದು ವಿವಾದಕ್ಕೆ ಕಾರಣವಾಗಿದ್ದಾರೆ.
ನವದೆಹಲಿ: ಭಾರತದ ಪ್ರವಾಸದಲ್ಲಿರುವ ಟ್ವಿಟ್ಟರ್ ಸಿಇಓ ಜಾಕ್ ಡೋರ್ಸಿ ಈಗ ಬ್ರಾಹ್ಮಣಿಕಲ್ ಪ್ರಭುತ್ವ ನಾಶಪಡಿಸಿ ಎನ್ನುವ ಪೋಸ್ಟರ್ ಹಿಡಿದು ವಿವಾದಕ್ಕೆ ಕಾರಣವಾಗಿದ್ದಾರೆ.
ಪತ್ರಕರ್ತರು, ಬರಹಗಾರರು, ಸಾಮಾಜಿಕ ಹೋರಾಟಗಾರರೊಂದಿಗೆ ನಡೆದ ದುಂಡು ಮೇಜಿನ ಸಭೆಯಲ್ಲಿ ಟ್ವಿಟ್ಟರ್ ಸಿಇಓ ಜಾಕ್ ಡೋರ್ಸಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದಲಿತ ಹೋರಾಟಗಾರ್ತಿಯೊಬ್ಬರು ಅವರಿಗೆ ಬ್ರಾಹ್ಮಣಿಕಲ್ ಪ್ರಭುತ್ವ ನಾಶಪಡಿಸಿ(Smash Brahmanical Patriarchy) ಎನ್ನುವ ಭಿತ್ತಿಪತ್ರವನ್ನು ನೀಡಿದ್ದಾರೆ. ಈ ಭಿತ್ತಿಪತ್ರವನ್ನು ಜಾಕ್ ಡೋರ್ಸಿ ಹಿಡಿರುವ ಚಿತ್ರವು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವಿವಾದಕ್ಕೆ ಕಾರಣವಾಗಿದೆ.
ಈ ಫೋಟೋವನ್ನು ಅನ್ನಾ ಎಂಎಂ ವೆಟ್ಟಿಕಾಡ್ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿರುವ ಮೋಹನ್ ದಾಸ್ ಪೈ " ಎಂತಹ ಅವಮಾನವಿದು; ಅದೇಗೆ ಜನರು ಸಮುದಾಯವೊಂದರ ಬಗ್ಗೆ ದ್ವೇಷ ಕಾರುವ ಪೋಸ್ಟರ್ ಹಾಕುತ್ತಾರೆ; ಜಾಕ್ ಡೋರ್ಸಿ ನೀವು ಟ್ವಿಟ್ಟರ್ ಸಿಇಓ ಆಗಿ ಅದೇಗೆ ಇಂತಹ ದ್ವೇಷದ ಭಾಗವಾಗಿದ್ದಿರಿ? ಇದು ನಿಜಕ್ಕೂ ಅಚ್ಚರಿ ಬ್ರಾಹ್ಮಿಣೋಪೋಬಿಯಾ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇನ್ನೊಂದೆಡೆ ಇದಕ್ಕೆ ಸ್ಪಷ್ಟೀಕರಣ ನೀಡಿರುವ ಟ್ವಿಟ್ಟರ್ ಇಂಡಿಯಾ " ಇದು ಟ್ವಿಟ್ಟರ್ ಅಥವಾ ನಮ್ಮ ಸಿಇಓ ಹೇಳಿಕೆಯಲ್ಲ, ಆದರೆ ವಿಶ್ವದಾದ್ಯಂತ ನಮ್ಮ ಸೇವೆಯ ವಿಚಾರವಾಗಿ ಪ್ರಮುಖ ಸಾರ್ವಜನಿಕ ಚರ್ಚೆಗಳನ್ನು ನೋಡಲು, ಕೇಳಲು ಮತ್ತು ಅರ್ಥಮಾಡಿಕೊಳ್ಳವ ಭಾಗವಾಗಿ ಟ್ವಿಟ್ಟರ್ ನ ಪ್ರಯತ್ನವಾಗಿದೆ ಎಂದು ಅವರು ತಿಳಿಸಿದರು.