ಕೋಲ್ಕತ್ತಾ: ನಗರದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬಾಂಗ್ಲಾದೇಶದ ಪ್ರಜೆಗಳು ಸಾವನ್ನಪ್ಪಿದ್ದಾರೆ.


COMMERCIAL BREAK
SCROLL TO CONTINUE READING

ಶುಕ್ರವಾರ ತಡ ರಾತ್ರಿ 1.50ರ ಸುಮಾರಿಗೆ ಷೇಕ್ಸ್‌ಪಿಯರ್ ಸರಾನಿ ಪೊಲೀಸ್ ಠಾಣೆ ಪ್ರದೇಶದ ಎಸ್‌ಪಿ ಸರಣಿ ಮತ್ತು ಲೌಡಾನ್ ಸ್ಟ್ರೀಟ್ ಕ್ರಾಸಿಂಗ್‌ನಲ್ಲಿ ಈ ಘಟನೆ ನಡೆದಿದೆ. ವೇಗವಾಗಿ ಬರುತ್ತಿದ್ದ ಜಾಗ್ವಾರ್ ವಾಹನವು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿ ಮತ್ತೊಂದು ಮರ್ಸಿಡಿಸ್ ಕಾರಿಗೆ ಡಿಕ್ಕಿ ಹೊಡೆದ ಬಳಿಕ ಅಲ್ಲೇ ನಿಂತಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ. 


ಮೂಲಗಳ ಪ್ರಕಾರ, ಬಾಂಗ್ಲಾದೇಶದ ಪ್ರಜೆಗಳಿಬ್ಬರೂ ಮಳೆಯಿಂದ ರಕ್ಷಣೆ ಪಡೆಯಲು ಇಲ್ಲಿನ ಪೊಲೀಸ್ ಕಂಟ್ರೋಲ್ ಬೂತ್ ಕೆಳಗೆ ನಿಂತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ವೇಗವಾಗಿ ಬಂದ ಜಾಗ್ವಾರ್ ಕಾರು ಇವೆರಿಗೆ ಡಿಕ್ಕಿ ಹೊಡೆದಿದೆ. ಕೂಡಲೇ ಇಬ್ಬರನ್ನೂ ಲಾಲಾ ಲಜಪತ್ ರಾಯ್ ಶರಣಿಯ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. 


ಮೃತರನ್ನು ಬಾಂಗ್ಲಾದೇಶದ ಜೆನೈದಾ ಜಿಲ್ಲೆಯ ನಿವಾಸಿ ಕಾಜಿ ಮೊಹಮದ್ ಮೈನುಲ್ ಆಲಂ (36) ಮತ್ತು ಢಾಕಾ ಮೂಲದ ಫರ್ಹಾನಾ ಇಸ್ಲಾಂ ತಾನಿಯಾ (30) ಎಂದು ಗುರುತಿಸಲಾಗಿದೆ.


ಮರ್ಸಿಡಿಸ್ ವಾಹನದ ಚಾಲಕ ಮತ್ತು ಪ್ರಯಾಣಿಕರಿಗೂ ಲಘು ಗಾಯಗಳಾಗಿವೆ. ಸದ್ಯ ಜಾಗ್ವಾರ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.