ಬಾಂಗ್ಲಾ ಮೂಲದ ಇಬ್ಬರು ಭಯೋತ್ಪಾದಕರ ಬಂಧನ
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ ರಾಜಧಾನಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ನೋಯ್ಡಾ: ಬಾಂಗ್ಲಾದೇಶದ ಇಬ್ಬರು ಭಯೋತ್ಪಾದಕರನ್ನು ಉತ್ತರಪ್ರದೇಶದ ನೋಯ್ಡಾದಲ್ಲಿ ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ ಮತ್ತು ಪಶ್ಚಿಮ ಬಂಗಾಳ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಸಿಕ್ಕಿಬಿದ್ದಿದ್ದು, ಬಂಧಿತರನ್ನು ಮುಷರಫ್ ಹುಸೇನ್ ಮತ್ತು ರುಬೆಲ್ ಅಹ್ಮದ್ ಎಂದು ಗುರುತಿಸಲಾಗಿದೆ. ಇವರು ರಾಷ್ಟ್ರ ರಾಜಧಾನಿಯಲ್ಲಿ ಭಯೋತ್ಪಾದಕ ಧಾಳಿ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ ರಾಜಧಾನಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ, ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆ ಕುರಿತಂತೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. 2016ರಲ್ಲಿ ನಾಗ್ರೋಟ ಆರ್ಮಿ ಕ್ಯಾಂಪ್ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಇತ್ತೀಚೆಗೆ ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ (ಎನ್ಐಎ) ಬಂಧಿಸಿರುವ ಜೈಶ್-ಎ-ಮೊಹಮ್ಮದ್ (ಜೆಎಂ)ನ ಭಯೋತ್ಪಾದಕರಾದ ಸೈಯದ್ ಮುನೀರ್ ಉಲ್-ಹಾಸನ್ ಖಾದ್ರಿ, ಆಶಿಕ್ ಬಾಬಾ ಮತ್ತು ತಾರಿಕ್ ಅಹ್ಮದ್ ದಾರ್ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದೆಹಲಿಯ ಕೆಂಪು ಕೋಟೆ, ಮರಗಳು, ಬಾಗಿಲುಗಳು, ಕೋಟೆಯ ಕಂಬಗಳು ಮತ್ತು ಕೋಟೆ ಮಾರ್ಗದಲ್ಲಿರುವ ಎಲ್ಲಾ ಒಳಚರಂಡಿಗಳ ಮೇಲೆ ಕಣ್ಣಿಟ್ಟಿದ್ದು, ಬಿಗಿ ಭದ್ರತೆ ಏರ್ಪಡಿಸಿದ್ದಾರೆ.