ಛತ್ತೀಸ್ಗಢದಲ್ಲಿ ನಕ್ಸಲರ ಅಟ್ಟಹಾಸ; ದೂರದರ್ಶನ ಕ್ಯಾಮೆರಾಮನ್ ಸೇರಿ ಇಬ್ಬರು ಪೋಲೀಸರ ಸಾವು
ಘಟನೆಯಲ್ಲಿ ಮತ್ತಿಬ್ಬರು ಭದ್ರತಾ ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಯಪುರ: ಛತ್ತೀಸ್ಗಢದ ದಾಂತೇವಾಡ ಜಿಲ್ಲೆಯ ಅರುಣ್ ಪುರದಲ್ಲಿ ಮಂಗಳವಾರ ನಡೆದ ನಕ್ಸಲರ ದಾಳಿಯಲ್ಲಿ ದೂರದರ್ಶನ ಕ್ಯಾಮರಾಮನ್ ಸೇರಿ ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಮೃತಪಟ್ಟಿದ್ದಾರೆ.
ಛತ್ತೀಸ್ಗಢದ ದಾಂತೇವಾಡಾ ಜಿಲ್ಲೆಯಲ್ಲಿ ನಕ್ಸಲರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಪೋಲಿಸ್ ಪೇದೆ ಮತ್ತು ರಾಷ್ಟ್ರೀಯ ವಾಹಿನಿ ದೂರದರ್ಶನದ ಕ್ಯಾಮೆರಾಮನ್ ಮೃತಪಟ್ಟಿರುವುದಾಗಿ ANI ಸುದ್ದಿ ಸಂಸ್ಥೆ ತಿಳಿಸಿದೆ. ಮೃತರನ್ನು ಸಬ್ ಇನ್ಸ್ ಪೆಕ್ಟರ್ ರುದ್ರ ಪ್ರತಾಪ್, ಸಹಾಯಕ ಪೇದೆ ಮಂಗಲು ಮತ್ತು ದೂರದರ್ಶನದ ಕ್ಯಾಮೆರಾಮೆನ್ ಅಚ್ಯುತಾನಂದ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಡಿಐಜಿ ಪಿ. ಸುಂದರ್ ರಾಜ್ ಅವರು, ಘಟನೆಯಲ್ಲಿ ಮತ್ತಿಬ್ಬರು ಭದ್ರತಾ ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ನಕ್ಸಲರ ದಾಳಿಯಲ್ಲಿ ಕ್ಯಾಮರಾಮನ್ ಸಾವಿಗೆ ಪ್ರಸಾರ ಭಾರತಿ ತೀವ್ರ ಸಂತಾಪ ಸೂಚಿಸಿದ್ದು, ಈ ಪರಿಸ್ಥಿತಿಯನ್ನು ಎದುರಿಸುವ ಶಕ್ತಿಯನ್ನು ಆ ದೇವರು ಮೃತನ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದೆ.