ರೋಡ್ ಶೋ ವೇಳೆ ಹಿಂಸಾಚಾರ: ಅಮಿತ್ ಶಾ ವಿರುದ್ಧ ಕೋಲ್ಕತ್ತಾ ಪೋಲಿಸರಿಂದ ಎರಡು ಎಫ್ಐಆರ್ ದಾಖಲು
ಕೊಲ್ಕತ್ತಾ ಪೊಲೀಸರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಬುಧವಾರ ಎರಡು ಎಫ್ಐಆರ್ ದಾಖಲಿಸಿದ್ದಾರೆ.
ದೆಹಲಿ/ಕೋಲ್ಕತಾ: ಲೋಕಸಭಾ ಚುನಾವಣೆ 2019ರ 7ನೆ ಹಂತದಲ್ಲಿ ಪಶ್ಚಿಮ ಬಂಗಾಳದ 9 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೊಲ್ಕತ್ತಾದಲ್ಲಿ ಮಂಗಳವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಮ್ಮಿಕೊಂಡಿದ್ದ ರೋಡ್ ಶೋ ಸಂದರ್ಭದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಹಿಂಸಾಚಾರದಲ್ಲಿ 100ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕೊಲ್ಕತ್ತಾ ಪೊಲೀಸರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಬುಧವಾರ ಎರಡು ಎಫ್ಐಆರ್ ದಾಖಲಿಸಿದ್ದಾರೆ. ಜೋಡಾಸಾಂಕೋ ಮತ್ತು ಅಮ್ಹೆರ್ಸ್ಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಈ ಎಫ್ಐಆರ್ ದಾಖಲಾಗಿದ್ದು, ಎರಡೂ ಎಫ್ಐಆರ್ ಗಳನ್ನೂ ಟಿಎಂಸಿ ವಿದ್ಯಾರ್ಥಿ ಸಂಘ ನೀಡಿದ ದೂರಿನ ಅನ್ವಯ ದಾಖಲಾಗಿವೆ ಎನ್ನಲಾಗಿದೆ.
ಏತನ್ಮಧ್ಯೆ, ನಿನ್ನೆ ನಡೆದ ಹಿಂಸಾಚಾರದಲ್ಲಿ ಬಿಜೆಪಿ ಕಾರ್ಯಕರ್ತರು ವಿವೇಕಾನಂದ ಕಾಲೇಜ್ ಬಳಿ ಸ್ಥಾಪಿಸಲಾಗಿದ್ದ 19 ನೇ ಶತಮಾನದ ಸಮಾಜ ಸುಧಾರಕ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಅಂತೆಯೇ ಈ ಬಗ್ಗೆ ಚುನಾವಣ ಆಯೋಗಕ್ಕೆ ದೂರು ಸಲ್ಲಿಸಲು ಸಮಯ ಕೋರಿದೆ. ಮತ್ತೊಂದೆಡೆ ಕೊಲ್ಕತ್ತಾದಲ್ಲಿ ಅಮಿತ್ ಶಾ ರೋಡ್ ಶೋ ವೇಳೆ ನಡೆದ ಹಿಂಸಾಚಾರವನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆಗೆ ಬಿಜೆಪಿ ಕರೆ ನೀಡಿದೆ.