VIDEO: ಇಂದು ಮುಂಜಾನೆ ಇಬ್ಬರು ಮಹಿಳೆಯರಿಂದ ಶಬರಿಮಲೆ ಅಯ್ಯಪ್ಪನ ದರ್ಶನ!
ಕೇರಳದ ಶಬರಿಮಲೆ ದೇವಾಲಯಕ್ಕೆ ಮಹಿಳೆಯರನ್ನು ಪ್ರವೇಶಿಸುವ ಪ್ರಯತ್ನ ಯಶಸ್ವಿಯಾಗಿದೆ. ಇಂದು ಮುಂಜಾನೆ ಸುಮಾರು 3:45ರ ವೇಳೆ ಭದ್ರತೆಯೊಂದಿಗೆ ತೆರಳಿ ಮಹಿಳೆಯರು ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ.
ಕೊಚ್ಚಿ: ಕೇರಳದ ಶಬರಿಮಲೆ ದೇವಾಲಯಕ್ಕೆ ಮಹಿಳೆಯರನ್ನು ಪ್ರವೇಶಿಸುವ ಪ್ರಯತ್ನ ಯಶಸ್ವಿಯಾಗಿದೆ. ಇಂದು ಮುಂಜಾನೆ ಸುಮಾರು 3:45ರ ವೇಳೆ ಭದ್ರತೆಯೊಂದಿಗೆ ತೆರಳಿ ಮಹಿಳೆಯರು ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ. ಶಬರಿಮಲೆ ದೇವಸ್ಥಾನದಲ್ಲಿ 10 ರಿಂದ 50 ವರ್ಷಗಳಿಂದ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸಾಂವಿಧಾನಿಕ ಪೀಠದಿಂದ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು.
ಸುದ್ದಿ ಸಂಸ್ಥೆ ಎಎನ್ಐ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಸುಮಾರು 40 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಇಂದು ಬೆಳಗ್ಗೆ ಸುಮಾರು 3:45ರ ವೇಳೆಯಲ್ಲಿ ಶಬರಿ ಗಿರಿಗೆ ತೆರಳಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ದರ್ಶನ ಪಡೆದ ಮಹಿಳೆಯರನ್ನು ಮಲಪ್ಪುರಂನ ಕನಕ ದುರ್ಗ ಮತ್ತು ಕಲ್ಲಿಕೋಟೆಯ ಬಿಂದು ಎಂದು ಗುರುತಿಸಲಾಗಿದೆ. ಇಬ್ಬರೂ ಮಹಿಳೆಯರು ಕಪ್ಪು ಬಣ್ಣದ ಉಡುಪು ಧರಿಸಿ ದೇವಾಲಯ ಪ್ರವೇಶಿಸಿದ್ದಾರೆ.
ಅಯ್ಯಪ್ಪ ಸ್ವಾಮಿ ದೇಗುಲದ ಒಳಗೆ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸುವ ನಿಯಮ 800 ವರ್ಷಗಳ ಹಿಂದಿನಿಂದಲೂ ಇದೆ. ಈ ಲಿಂಗ ತಾರತಮ್ಯವುಳ್ಳ ಕ್ರಮವನ್ನು ಪ್ರಶ್ನಿಸಿ ಇಂಡಿಯನ್ ಯಂಗ್ ಲಾಯರ್ಸ್ ಅಸೋಶಿಯೇಶನ್ 2006ರಲ್ಲಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಮಹಿಳೆಯರಿಗೆ ನಿಷೇಧ ಹೇರಿರುವುದು ಸಂಪ್ರದಾಯ ಅಥವಾ ಹಿಂದೂ ಧರ್ಮದ ನಿಯಮ ಪಾಲನೆ ಅಲ್ಲ. ಇದು ಮಹಿಳೆಯರ ವಿರುದ್ಧ ಅನುಸರಿಸುವ ತಾರತಮ್ಯ ನೀತಿ ಎಂದು ವಾದ ಮಂಡಿಸಿತು.
ಜೊತೆಗೆ ಋತುಮತಿಯಾದ ಮಹಿಳೆಯರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ಬಗ್ಗೆಯೂ ತಕರಾರು ಪ್ರತ್ಯೇಕ ಅರ್ಜಿ ಸಲ್ಲಿಸಿತು. ಈ ಪ್ರಕರಣದ ವಿಚಾರಣೆ ವೇಳೆ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಸಾಂವಿಧಾನಿಕ ಪೀಠ ಅಸಮಾಧಾನ ಹೊರಹಾಕಿತ್ತು.
ಈ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠವು 2017 ರ ಅಕ್ಟೋಬರ್ ನಲ್ಲಿ ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿತ್ತು. ಪ್ರಕರಣ ಕುರಿತು ಸುದೀರ್ಘ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ರೋಹಿಂಗ್ಟನ್ ನಾರೀಮನ್, ಎ.ಎಂ. ಖಾನ್ವೀಲ್ಕರ್, ಡಿ.ವೈ. ಚಂದ್ರಚೂಡ್ ಮತ್ತು ಇಂಧು ಮಲ್ಹೋತ್ರಾ ಅವರನ್ನೊಳಗೊಂಡ ಸಂವಿಧಾನಿಕ ಪೀಠ ಸುದೀರ್ಘ ವಿಚಾರಣೆ ಮಾಡಿ ಇದೇ ಆಗಸ್ಟ್ 1 ರಂದು ತೀರ್ಪನ್ನು ಕಾಯ್ದಿರಿಸಿತ್ತು. ಸೆ. 28ರಂದು ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಮಹತ್ವದ ಸ್ಥಾನವಿದೆ. ಭಾರತದಲ್ಲಿ ಮಹಿಳೆಯರನ್ನು ದೇವತೆಯಂತೆ ನೋಡಲಾಗುತ್ತದೆ. ಮಹಿಳೆಯರು ಪುರುಷರಿಗೆ ಸಮಾನ ಎಂದು ತಿಳಿಸಿದೆ. ದೇವರ ಪ್ರಾರ್ಥನೆಗೆ ಯಾವುದೇ ಬೇಧ-ಭಾವವಿಲ್ಲ ಹೇಳಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಐತಿಹಾಸಿಕ ತೀರ್ಪುನ್ನು ಪ್ರಕಟಿಸಿತ್ತು.