ನವದೆಹಲಿ: ಆಧಾರ್ ನಿಂದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(TRAI) ಅಧ್ಯಕ್ಷ ಆರ್. ಎಸ್. ಶರ್ಮಾ ಅವರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿಲ್ಲ ಎಂದಿರುವ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) TRAI ಅಧ್ಯಕ್ಷರ ಮಾಹಿತಿ ಸೋರಿಕೆ ವಿಚಾರವನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.



COMMERCIAL BREAK
SCROLL TO CONTINUE READING

ಆಧಾರ್ ಜನರಲ್ಲಿ ಡಿಜಿಟಲ್ ನಂಬಿಕೆಯನ್ನು ಸೃಷ್ಟಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಇಂತಹ ಕೆಲವು ಮೋಸಗಾರರು ಸಕ್ರಿಯವಾಗಿದ್ದು, ಜನರಲ್ಲಿ ಆಧಾರ್ ಬಗ್ಗೆ ತಪ್ಪು ಮಾಹಿತಿ ಹರಡಲು ಪ್ರಯತ್ನಿಸುತ್ತಿವೆ. ವಿಶ್ವದ ಅತಿ ದೊಡ್ಡ ವಿಶಿಷ್ಟ ಗುರುತಿನ ಯೋಜನೆ-ಆಧಾರ್ ಅನ್ನು ದುರುಪಯೋಗಪಡಿಸಿಕೊಳ್ಳಲು ಕೆಲವು ಜನರಿಂದ ಇಂತಹ ದುರುದ್ದೇಶಪೂರಿತ ಪ್ರಯತ್ನಗಳನ್ನು ಯುಐಡಿಎಐ ಖಂಡಿಸುತ್ತದೆ ಎಂದು ಯುಐಡಿಎಐ ಟ್ವೀಟ್ ನಲ್ಲಿ ತಿಳಿಸಿದೆ.


ಆಧಾರ್ ಡಾಟಾ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಕಳೆದ ಎಂಟು ವರ್ಷಗಳಿಂದ ಅದರ ಸುರಕ್ಷತೆಯ ದೃಢತೆಯನ್ನು ಸಾಬೀತುಪಡಿಸಿದೆ. ಆಧಾರ್ ಸಂಖ್ಯೆಯನ್ನು ಬಳಸಿ ಶರ್ಮಾ ಅವರ ವೈಯಕ್ತಿಕ ಮಾಹಿತಿ ಹ್ಯಾಕ್ ಮಾಡಿಲ್ಲ. ಇದೊಂದು ವದಂತಿಯಷ್ಟೇ. ಜನರು ಇಂತಹ ವದಂತಿಗಳಿಗೆ ಕಿವಿಗೊಡಬಾರದು. ಆಧಾರ್ ಡಾಟಾ ಅಥವಾ ಯುಐಡಿಎಐನ ಸರ್ವರ್ ನಿಂದ  ಶ್ರೀ ಆರ್.ಎಸ್. ಶರ್ಮಾ ಅವರ ಯಾವುದೇ ವೈಯಕ್ತಿಕ ಮಾಹಿತಿ ಹ್ಯಾಕ್ ಆಗಿಲ್ಲ ಎಂದು UIDAI ಸ್ಪಷ್ಟವಾಗಿ ಹೇಳಿದೆ.


ಶರ್ಮಾ ಅವರು ಈ ಹಿಂದೆ ಎನ್ಐಸಿ ಕಾರ್ಯದರ್ಶಿಯಾಗಿದ್ದರು. ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ಐಸಿ) ವೆಬ್ಸೈಟ್ ನಲ್ಲಿ ಶರ್ಮಾ ವರ ಮೊಬೈಲ್ ಸಂಖ್ಯೆ ಇದೆ. ಐಎಎಸ್ ಅಧಿಕಾರಿಗಳ ಪಟ್ಟಿಯಲ್ಲಿ ಶರ್ಮಾ ಅವರ ಜನ್ಮದಿನದ ವಿವರ ಲಭ್ಯವಿದೆ. TRAI ವೆಬ್ ಸೈಟ್ ನಲ್ಲಿ ಅವರ ವಿಳಾಸ ಲಭ್ಯವಿದೆ ಎಂದು ತಿಳಿಸಿರುವ ಯುಐಡಿಎಐ, ಈ ಎಲ್ಲಾ ಮಾಹಿತಿಯನ್ನು ಒಟ್ಟುಗೂಡಿಸಿ ಶರ್ಮಾ ಅವರ ವೈಯಕ್ತಿಕ ಮಾಹಿತಿಯನ್ನು ಪ್ರಕಟಿಸಿ ಆಧಾರ್ ಡೇಟಾಬೇಸ್ ಹ್ಯಾಕ್ ಮಾಡಿದ್ದೇವೆ ಎಂಬ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದು ಹೇಳಿದೆ.