ಸೋನಿಪತ್ : ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ಗಿಲ್ ಹುತಾತ್ಮ ಯೋಧನ ಪತ್ನಿ ಆಧಾರ್ ಕಾರ್ಡ್ ತರಲಿಲ್ಲ ಸಲ್ಲಿಸಲಿಲ್ಲ ಎಂಬ ಕಾರಣಕ್ಕೆ ಹರಿಯಾಣದ ಸೋನಿಪತ್ ನ ಟುಲಿಪ್ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. 


COMMERCIAL BREAK
SCROLL TO CONTINUE READING

1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದ ಕಾರ್ಗಿಲ್ ನ 8ನೇ ಜಟ್ ರೆಜಿಮೆಂಟ್ ನಲ್ಲಿ ಯೋಧರಾಗಿದ್ದ ಹವಾಲ್ದಾರ್ ಲಕ್ಷ್ಮಣ್ ದಾಸ್ ಅವರ ಪತ್ನಿ ಶಕುಂತಲಾ ಅವರೇ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಒಳಗಾಗಿ ಮೃತಪಟ್ಟ ಮಹಿಳೆ. 


"ನನ್ನ ತಾಯಿಯ ಆರೋಗ್ಯ ತೀವ್ರ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ನಾನು ಅವರನ್ನು ಆಸ್ಪತ್ರೆಗೆ ಕರೆತಂದಿದ್ದೆನು. ಆಗ ಅವರು ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದರು. ಆದರೆ ನಾನು ಆಧಾರ್ ಕಾರ್ಡನ್ನು ನನ್ನೊಂದಿಗೆ ತಂದಿಲ್ಲದ ಕಾರಣ ನನ್ನ ಮೊಬೈಲ್ನಲ್ಲಿದ್ದ ಆಧಾರ್ ಕಾರ್ಡ್ ಪ್ರತಿಯನ್ನು ತೋರಿಸಿದೆ. ಆದರೆ ಆಸ್ಪತ್ರೆ ಸಿಬ್ಬಂದಿ ಮೂಲ ಆಧಾರ್ ಕಾರ್ಡ್ ತೋರಿಸುವಂತೆ ಹೇಳಿದರಲ್ಲದೆ, ಚಿಕಿತ್ಸೆ ನೀಡಲು ನಿರಾಕರಿಸಿದರು'' ಎಂದು ಮೃತ ಮಹಿಳೆಯ ಮಗ ಕುಮಾರ್ ತಿಳಿಸಿದ್ದಾರೆ. 


"ನಾನು ಇನ್ನೊಂದು ಗಂಟೆಯೊಳಗೆ ಆಧಾರ್ ಕಾರ್ಡ್ ತರುವುದಾಗಿ ಹೇಳಿ, ಅಲ್ಲಿಯವರೆಗೆ ಕಾಯದೆ ಚಿಕಿತ್ಸೆ ನೀಡಲು ಕೇಳಿಕೊಂಡೆ. ಆದರೆ ಆಸ್ಪತ್ರೆ ಸಿಬ್ಬಂದಿ ಅದಕ್ಕೂ ಒಪ್ಪಲಿಲ್ಲ'' ಎಂದು ಕುಮಾರ್ ಆರೋಪಿಸಿದ್ದಾರೆ. 


ಮೃತ ಶಕುಂತಲಾ ದೇವಿ ಅವರು ಗಂಟಲು ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಅವರ ಪರಿಸ್ಥಿತಿ ತೀರಾ ಚಿಂತಾಜನಕವಾಗಿದ್ದು ಕೂಡಲೇ ಅವರನ್ನು ಚಿಕಿತ್ಸೆಗಾಗಿ ತುಲೀಪ್ ಆಸ್ಪತ್ರೆಗೆ ಕರೆತರಲಾಗಿತ್ತು. 


ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯರು ಆಸ್ಪತ್ರೆಗೆ ಆತ ಯಾರನ್ನೂ ಕರೆದುಕೊಂಡು ಬಂದಿರಲಿಲ್ಲ. ಹಾಗೇ ನಾವು ಆಧಾರ್ ಕಾರ್ಡ್ ಗೋಸ್ಕರ ಚಿಕಿತ್ಸೆ ನೀಡಲು ನಿರಾಕರಿಸಿಲ್ಲ. ಆಸ್ಪತ್ರೆಯಲ್ಲಿ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಆದರೆ ಅದು ಕೇವಲ ದಾಖಲೀಕರಣಕ್ಕಾಗಿ ಹೊರತು ಚಿಕಿತ್ಸೆಗಾಗಿ ಅಲ್ಲ ಎಂದು ಹೇಳಿದ್ದಾರೆ.