ನವದೆಹಲಿ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಮ್‌ಸಿ) ಬ್ಯಾಂಕ್ ಖಾತೆದಾರರೊಬ್ಬರು ಸೋಮವಾರ ರಾತ್ರಿ ಭಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೃತ ಗ್ರಾಹಕರನ್ನು ಸಂಜಯ್ ಗುಲಾಟಿ ಎಂದು ಗುರುತಿಸಲಾಗಿದೆ. ಪಿಎಂಸಿ ಬ್ಯಾಂಕಿನಲ್ಲಿ ಸುಮಾರು 4,500 ಕೋಟಿ ರೂ.ಗಳ ಹಗರಣದ ವಿರುದ್ಧ ಪ್ರತಿಭಟನೆಯಲ್ಲಿ ಸಂಜಯ್ ಗುಲಾಟಿ ಸೋಮವಾರ ಗುರುತಿಸಿಕೊಂಡಿದ್ದರು. 


COMMERCIAL BREAK
SCROLL TO CONTINUE READING

ಸಂಜಯ್ ಗುಲಾಟಿ ಕುಟುಂಬ ಸದಸ್ಯರು ಮತ್ತು ಆಪ್ತರ ಪ್ರಕಾರ, ಪಿಎಂಸಿ ಬ್ಯಾಂಕ್ ಹಗರಣ ಬೆಳಕಿಗೆ ಬಂದ ನಂತರ ಗುಲಾಟಿ ಸಾಕಷ್ಟು ಒತ್ತಡದಲ್ಲಿದ್ದರು. ಅವರು ಬ್ಯಾಂಕಿನಲ್ಲಿ ದೊಡ್ಡ ಮೊತ್ತದ ಹಣ ಠೇವಣಿದಾರರಾಗಿದ್ದರು. ನಾಲ್ಕು ಖಾತೆಗಳಲ್ಲಿ ಸುಮಾರು 80 ಲಕ್ಷ ರೂ. ಠೇವಣಿ ಇಟ್ಟಿದ್ದರು ಎನ್ನಲಾಗಿದೆ. ಇದು ವಿಶೇಷವಾಗಿ ಅವರ ಮಗನ ವೈದ್ಯಕೀಯ ವೆಚ್ಚಕ್ಕಾಗಿ ಇರಿಸಲಾಗಿದ್ದ ಹಣ ಎನ್ನಲಾಗಿದೆ. ಮಗನ ಚಿಕಿತ್ಸೆಗಾಗಿ ಹಣ ವಿತ್ ಡ್ರಾ ಮಾಡಲಾಗದ ಕಾರಣ ಒತ್ತಡದಲ್ಲಿದ್ದ ಸಂಜಯ್ ಗುಲಾಟಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.


ಪಿಎಂಸಿ ಹಗರಣಕ್ಕೆ ಸಂಬಂಧಿಸಿದ ಕೆಲವು ಆರೋಪಿಗಳನ್ನು ವಿಚಾರಣೆಗಾಗಿ ಮುಂಬೈನ ಎಸ್ಪ್ಲನೇಡ್ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಗುಲಾಟಿ ಮತ್ತು ಇತರ ಹಲವಾರು ಪಿಎಂಸಿ ಬ್ಯಾಂಕ್ ಖಾತೆದಾರರು ಮತ್ತು ಗ್ರಾಹಕರು ಮುಂಬೈನ ಎಸ್ಪ್ಲನೇಡ್ ನ್ಯಾಯಾಲಯದ ಹೊರಗೆ ಪ್ರತಿಭಟನೆ ನಡೆಸಿದರು. 


ಜೀ ಮೀಡಿಯಾಕ್ಕೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ, ಪಿಎಮ್‌ಸಿ ಬ್ಯಾಂಕ್ ಅಧಿಕಾರಿಗಳು ಗ್ರಾಹಕರ ಹಣವನ್ನು ಬಳಸಿಕೊಂಡು ನಿಯಮಗಳನ್ನು ಗಾಳಿಗೆ ತೂರಿ ಖಾಸಗಿ ಆಸ್ತಿಗಳನ್ನು ಮಾಡಿಕೊಂಡಿದ್ದಾರೆ. ಎಚ್‌ಡಿಐಎಲ್ ಪ್ರವರ್ತಕರೊಂದಿಗೆ ಹಿರಿಯ ಅಧಿಕಾರಿಗಳು ಪಿಎಂಸಿ ಬ್ಯಾಂಕಿನ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.


ಆರು ತಿಂಗಳೊಳಗೆ ಖಾತೆದಾರರಿಗೆ 40,000 ರೂಗಳನ್ನು ಹಿಂಪಡೆಯಲು ಆರ್‌ಬಿಐ ಸೋಮವಾರ ಪಿಎಂಸಿ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಪರಿಹಾರ ನೀಡಿತು. ಹಿಂದಿನ ವಾಪಸಾತಿ ಮಿತಿ 25 ಸಾವಿರ ರೂ. ಇತ್ತು.


ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಸೋಮವಾರ ಪಿಎಂಸಿ ಬ್ಯಾಂಕ್ ಗ್ರಾಹಕರು ಯಾವುದೇ ನಷ್ಟವನ್ನು ಎದುರಿಸುವುದಿಲ್ಲ ಎಂದು ಭರವಸೆ ನೀಡಿದ್ದರಿಂದ ಕೇಂದ್ರವು ಆರ್‌ಬಿಐಗೆ ತಮ್ಮ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಡೆಯುತ್ತಿರುವ ಬಿಕ್ಕಟ್ಟನ್ನು ಆದಷ್ಟು ಬೇಗ ಪರಿಹರಿಸಬೇಕೆಂದು ಕೇಳಿಕೊಂಡಿದೆ.


ಹಿಂದಿನ ಸಾಲಗಳನ್ನು ಮರುಪಾವತಿ ಮಾಡದಿದ್ದರೂ ಪಿಎಮ್‌ಸಿ ಬ್ಯಾಂಕ್ ಅಧಿಕಾರಿಗಳು 2008 ಮತ್ತು 2019 ರ ನಡುವೆ ಎಚ್‌ಡಿಐಎಲ್‌ಗೆ ಸಾಲ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಎಂಸಿ ಬ್ಯಾಂಕಿನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಾಯ್ ಥಾಮಸ್ ಈಗಾಗಲೇ ಪೊಲೀಸ್ ವಶದಲ್ಲಿದ್ದಾರೆ.


ಪಿಎಂಸಿ ಬ್ಯಾಂಕ್ ಮಾಜಿ  ಅಧ್ಯಕ್ಷ ವಾರಮ್ ಸಿಂಗ್ ಮತ್ತು ಹೌಸಿಂಗ್ ಡೆವಲಪ್ಮೆಂಟ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಚ್ಡಿಐಎಲ್) ನಿರ್ದೇಶಕರಾದ ರಾಕೇಶ್ ವಾಧವನ್ ಮತ್ತು ಸಾರಂಗ್ ವಾಧ್ವಾನ್ ಅವರನ್ನು ಸೋಮವಾರ ಎಸ್ಪ್ಲನೇಡ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯದಲ್ಲಿ ಅವರ ಪೊಲೀಸ್ ಕಸ್ಟಡಿಯನ್ನು ಅಕ್ಟೋಬರ್ 16 ರವರೆಗೆ ವಿಸ್ತರಿಸಲಾಗಿದೆ.