ಇಂಡಿಯಾ ಗೇಟ್ ಬಳಿ ಐಸ್ ಕ್ರೀಂ ತಿನ್ನುತ್ತಿದ್ದವರ ಮೇಲೆ ಹರಿದ ಟ್ರಕ್, ತಂದೆ-ಮಗಳ ಸಾವು
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮೃತ ಬಾಲಕಿಯು ಇಂಡಿಯಾ ಗೇಟ್ ಬಳಿಯ ಮಾನ್ಸಿಂಗ್ ರಸ್ತೆಯಲ್ಲಿ ಸ್ಕೂಟಿಯಲ್ಲಿ ತನ್ನ ಹೆತ್ತವರೊಂದಿಗೆ ಬಂದಿದ್ದಳು.
ನವದೆಹಲಿ: ಇಂಡಿಯಾ ಗೇಟ್ ಬಳಿ ಸೋಮವಾರ ರಾತ್ರಿ ಅತಿ ವೇಗದಲ್ಲಿ ಬರುತ್ತಿದ್ದ ಟ್ರಕ್, ಪಾದಚಾರಿ ಮಾರ್ಗದಲ್ಲಿ ಐಸ್ ಕ್ರೀಂ ತಿನ್ನುತ್ತಿದ್ದವರ ಮೇಲೆ ಹರಿದು, ಅಪಘಾತದಲ್ಲಿ ಎಂಟು ವರ್ಷದ ಬಾಲಕಿ ಮತ್ತು ಆಕೆಯ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇತರ ಇಬ್ಬರು ಗಾಯಗೊಂಡಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮೃತ ಬಾಲಕಿ ಇಂಡಿಯಾ ಗೇಟ್ ಬಳಿಯ ಮಾನ್ಸಿಂಗ್ ರಸ್ತೆಯಲ್ಲಿ ಸ್ಕೂಟಿಯಲ್ಲಿ ತನ್ನ ಹೆತ್ತವರೊಂದಿಗೆ ಬಂದಿದ್ದಳು. ಈ ಘಟನೆಯಲ್ಲಿ, ಟ್ರಕ್ ರಸ್ತೆಯಲ್ಲಿ ನಿಂತಿದ್ದ ಮೂರು ಆಟೋಗಳಿಗೂ ಸಹ ಡಿಕ್ಕಿ ಹೊಡೆದಿದ್ದು, ಇದರಲ್ಲಿ ಆಟೋ ಚಾಲಕನಿಗೆ ಗಂಭೀರ ಗಾಯಗಳಾಗಿವೆ.
ಅಪಘಾತ ರಾತ್ರಿ 12 ಗಂಟೆ ಸುಮಾರಿಗೆ ಸಂಭವಿಸಿದೆ. ಮಾನ್ಸಿಂಗ್ ರಸ್ತೆಯಲ್ಲಿ ವೇಗವಾಗಿ ಟ್ರಕ್ ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿ ಮಾರ್ಗದಲ್ಲಿ ಚಲಿಸಿದೆ ಮತ್ತು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಆಟೋ ಮತ್ತು ಸ್ಕೂಟಿಯನ್ನು ದಾಟಿ ಉದ್ಯಾನವನಕ್ಕೆ ಪ್ರವೇಶಿಸಿದೆ.