ನವದೆಹಲಿ: ಈಗಾಗಲೇ ಸದನದ ಒಳಗೆ ಮತ್ತು ಹೊರಗೆ ಭಾರಿ ಕೋಲಾಹಲ ಸೃಷ್ಟಿಸಿರುವ ಈ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿಯೇ ಮಂಡಿಸಿ ಎರಡೂ ಸದನಗಳ ಅನುಮೋದನೆ ಪಡೆಯಲು ಮೋದಿ ಸರ್ಕಾರ ಸಿದ್ಧವಾಗಿದೆ. ಡಿಸೆಂಬರ್ 31, 2014ರವರೆಗೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಅಲ್ಲಿನ ಧಾರ್ಮಿಕ ಕಿರುಕುಳದಿಂದ ಪಾರಾಗಿ ಭಾರತ ಪ್ರವೇಶಿಸಿರುವ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರಿಶ್ಚಿಯನ್ ಧರ್ಮದ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡುವ ಕುರಿತು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. 

COMMERCIAL BREAK
SCROLL TO CONTINUE READING

ಆದರೆ, ಈ ಮಸೂದೆಯಲ್ಲಿ ಕೇವಲ ಮುಸ್ಲಿಮೆತರನ್ನು ಮಾತ್ರ ಪರಿಗಣಿಸಲಾಗಿದ್ದು, ಕೇಂದ್ರ ಸರ್ಕಾರ ಪೌರತ್ವವನ್ನು ಕೆಲ ಧರ್ಮಗಳಿಗೆ ಮಾತ್ರ ಸೀಮಿತಗೊಳಿಸಿದೆ ಎಂದು ಕಾಂಗ್ರೆಸ್ ಮತ್ತು ಎಡಪಕ್ಷಗಳು ಆರೋಪಿಸಿವೆ. ಇನ್ನೊಂದೆಡೆ ದೇಶದಲ್ಲಿ ಅಕ್ರಮ ವಲಸಿಗರಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮತ್ತು ನಿರ್ಧಿಷ್ಟ ಧರ್ಮಕ್ಕೆ ಸೀಮಿತವಾಗಿರದ NRC ಕಾಯ್ದೆಯನ್ನು ದೇಶಾದ್ಯಂತ ವಿಸ್ತರಿಸುವುದಾಗಿ ಮೋದಿ ಸರ್ಕಾರ ಘೋಷಿಸಿರುವುದು ಕೂಡ ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. 
1955ರ ಪೌರತ್ವ ಕಾಯಿದೆ ಪ್ರಕಾರ ವಿದೇಶಿ ವ್ಯಕ್ತಿಯೊಬ್ಬ ಭಾರತದಲ್ಲಿದ್ದು ಇಲ್ಲಿನ ಸರ್ಕಾರದಲ್ಲಿ 11 ತಿಂಗಳು ಸೇವೆ ಸಲ್ಲಿಸಿರುವ ಜೊತೆಗೆ ಹಲವು ಷರತ್ತುಗಳಿಗೆ ಬದ್ಧನಾಗಿದ್ದರೆ ಆತನಿಗೆ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಅವಕಾಶ ಇದೆ. ಆದರೆ, ಪ್ರಸ್ತಾವಿತ ಮಸೂದೆಯಲ್ಲಿ ಈ ಮೊದಲು ನಮೂದಿಸಲಾದ ಧರ್ಮಕ್ಕೆ ಸೇರಿದ ವ್ಯಕ್ತಿಯೋರ್ವನ ತಂದೆ ಭಾರತದಲ್ಲಿಯೇ ಜನಿಸಿದ್ದ ಎಂಬುದಕ್ಕೆ ಯಾವುದೇ ದಾಖಲೆ ಇಲ್ಲದಿದ್ದರೂ ಕೂಡ, ಆತ ಭಾರತದಲ್ಲಿ ಕನಿಷ್ಠ 6 ವರ್ಷಗಳ ಕಾಲ ನೆಲೆಸಿದ್ದ ಎಂಬುದಕ್ಕೆ ದಾಖಲೆ ತೋರಿಸಿ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.


ಕೆಲ ವರ್ಷಗಳ ಹಿಂದೆ ಈ ರೀತಿ ಭಾರತ ಪ್ರವೇಶಿಸಿರುವ ಅಕ್ರಮ ವಲಸಿಗರು ಧರಣಿ ನಡೆಸಿ ತಮ್ಮನ್ನು ಶಾಶ್ವತವಾಗಿ ಭಾರತೀಯ ಪ್ರಜೆಗಳನ್ನಾಗಿ ಮಾಡಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅಷ್ಟೇ ಅಲ್ಲ ಅಂದಿನ ಗೃಹ ಸಚಿವರಾಗಿದ್ದ ರಾಜನಾಥ್ ಸಿಂಗ್ ಅವರನ್ನೂ ಸಹ ಭೇಟಿ ಮಾಡಿದ್ದರು. ಆದರೆ, ಸದ್ಯ ಆಸ್ತಿತ್ವದಲ್ಲಿರುವ ಕಾಯ್ದೆ ಮೂಲಕ ಈ ರೀತಿ ಮಾಡುವುದು ಸಾಧ್ಯವಿರದ ಕಾರಣ, ಸರ್ಕಾರ ಈ ಕಾಯಿದೆಗೆ ತಿದ್ದುಪಡಿ ತರಲು ಮುಂದಾಗಿದೆ.