ನಾಳೆ ಮಧ್ಯಾಹ್ನ 1 ಗಂಟೆಗೆ ಕೇಂದ್ರ ಸಚಿವ ಅನಂತ ಕುಮಾರ್ ಅಂತ್ಯಕ್ರಿಯೆ
ನಾಳೆ ಮಧ್ಯಾಹ್ನ 1 ಗಂಟೆಗೆ ಚಾಮರಾಜಪೇಟೆಯ ಟಿ.ಆರ್ ಮಿಲ್ ಬಳಿ ಇರುವ ಚಿತಾಗಾರದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಅಂತ್ಯಕ್ರಿಯೆ ನಡೆಯಲಿದೆ.
ಬೆಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 1 ಗಂಟೆಗೆ ಚಾಮರಾಜಪೇಟೆಯ ಟಿ.ಆರ್ ಮಿಲ್ ಬಳಿ ಇರುವ ಚಿತಾಗಾರದಲ್ಲಿ ನಡೆಯಲಿದೆ.
ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಕೇಂದ್ರ ಸಚಿವ ಅನಂತಕುಮಾರ್ ಪಾರ್ಥಿವ ಶರೀರವನ್ನು ಇಂದು ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ನಾಳೆ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಬೆಂಗಳೂರಿನ ಬಿಜೆಪಿ ಮುಖ್ಯ ಕಚೇರಿಯಲ್ಲಿ ದರ್ಶನಕ್ಕೆ ಇಡಲಾಗುವುದು. ನಂತರ ಅಲ್ಲಿಂದ ಬೆಳಿಗ್ಗೆ 10 ಗಂಟೆಗೆ ಬಸವನಗುದಿಯಲ್ಲಿರುವ ನ್ಯಾಷನಲ್ ಕಾಲೇಜು ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಬಳಿಕ ಮಧ್ಯಾಹ್ನ 1 ಗಂಟೆಗೆ ಚಾಮರಾಜಪೇಟೆಯ ಟಿ.ಆರ್ ಮಿಲ್ ಬಳಿ ಇರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಬಿಜೆಪಿ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ತೀವ್ರ ಅನಾರೋಗ್ಯದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಕಳೆದ 20 ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಅನಂತ್ ಕುಮಾರ್ ಅವರು ಪತ್ನಿ ತೇಜಸ್ವಿನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಅನಂತ್ ಕುಮಾರ್ ಸಹೋದರ ನಂದಕುಮಾರ್ ಅಂತ್ಯಕ್ರಿಯೆ ನೆರವೇರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.