ಫೋನಿ ಎಫೆಕ್ಟ್: ಒಡಿಶಾದಲ್ಲಿ ಬ್ಯಾಂಕಿಂಗ್, ಹೋಟೆಲ್ ಉದ್ಯಮಕ್ಕೆ ಭಾರೀ ನಷ್ಟ; ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಧರ್ಮೇಂದ್ರ ಪ್ರಧಾನ್ ಪತ್ರ
ಪುರಿ ಜಿಲ್ಲೆಯಲ್ಲಿ ಚಂಡಮಾರುತದಿಂದ ಬ್ಯಾಂಕಿಂಗ್ ಕ್ಷೇತ್ರ ತೀವ್ರ ಹಾನಿಗೊಳಗಾಗಿದೆ. ಕೇವಲ ಪುರಿ ನಗರದಲ್ಲಿಯೇ 273 ಎಟಿಎಂಗಳಲ್ಲಿ ಕೇವಲ 20 ಎಟಿಎಂಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ನವದೆಹಲಿ: ಇತ್ತೀಚಿಗೆ ಒಡಿಶಾ ರಾಜ್ಯಕ್ಕೆ ಅಪ್ಪಳಿಸಿದ ಫೋನಿ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗೆ ಸಂಬಂಧಿಸಿದಂತೆ ಸಭೆ ರಿಸರ್ವ್ ಬ್ಯಾಂಕ್ ಮತ್ತು ಸಾರ್ವಜನಿಕ-ಖಾಸಗಿ ವಲಯದ ಬ್ಯಾಂಕುಗಳ ಪ್ರತಿನಿಧಿಗಳೊಂದಿಗೆ ಗುರುವಾರ ಸಭೆ ನಡೆಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಬ್ಯಾಂಕಿಂಗ್ ಸೇವೆಯ ಮರುಸ್ಥಾಪನೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದ ಪುರಿ ಜಿಲ್ಲೆಯಲ್ಲಿ ಚಂಡಮಾರುತದಿಂದ ಬ್ಯಾಂಕಿಂಗ್ ಕ್ಷೇತ್ರ ತೀವ್ರ ಹಾನಿಗೊಳಗಾಗಿದೆ. ಕೇವಲ ಪುರಿ ನಗರದಲ್ಲಿಯೇ 273 ಎಟಿಎಂಗಳಲ್ಲಿ ಕೇವಲ 20 ಎಟಿಎಂಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಬ್ಯಾಂಕುಗಳಲ್ಲಿ ಕೇವಲ 25% ಮಾತ್ರ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ಪಾಸ್ ಬುಕ್ ಮೂಲಕ ಕನಿಷ್ಠ 2000 ರೂ. ಹಣ ಡ್ರಾ ಮಾಡಲು ಎಸ್ಬಿಐನಲ್ಲಿ ಅವಕಾಶ ನೀಡಲಾಗಿದ್ದು, ಇದೇ ಕ್ರಮವನ್ನು ಎಲ್ಲಾ ಬ್ಯಾಂಕುಗಳೂ ಅನುಸರಿಸುವಂತೆ ತಿಳಿಸಲಾಗಿದೆ. ಜೊತೆಗೆ, ಅಲ್ಲಲ್ಲಿ ಗ್ರಾಹಕ ಸೇವಾ ಕೇಂದ್ರಗಳನ್ನು, ಮೊಬೈಲ್ ಎಟಿಎಂಗಳನ್ನು ತೆರೆಯಲು ಸೂಚಿಸಲಾಗಿದೆ ಎಂದು ಪ್ರಧಾನ್ ತಿಳಿಸಿದ್ದಾರೆ.
ಚಂಡಮಾರುತದಿಂದಾಗಿ ಪುರಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ನೆಲಕಚ್ಚಿದ್ದು, ಹೋಟೆಲ್ ಉದ್ಯಮಕ್ಕೆ ಭಾರೀ ನಷ್ಟವಾಗಿದೆ. ಹೀಗಾಗಿ ಹೋಟೆಲ್ ಮತ್ತು ಪ್ರವಾಸೋದ್ಯಮಕ್ಕಾಗಿ ಪುನರ್ನಿರ್ಮಾಣ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಪತ್ರದಲ್ಲಿ ಬರೆದಿದ್ದಾರೆ.
ಅಲ್ಲದೆ, ಚಂಡಮಾರುತ ಪೀಡಿತ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ಒದಗಿಸಲು ಹಣಕಾಸು ಸಚಿವರಿಗೆ ಮನವಿ ಮಾಡಿರುವ ಧರ್ಮೇಂದ್ರ ಪ್ರಧಾನ್, ಅಸ್ತಿತ್ವದಲ್ಲಿರುವ ಸಾಲವನ್ನು ಪುನರ್ರಚಿ, ತೀವ್ರ ಹಾನಿಗೊಳಗಾಗಿರುವ ಉತ್ಪಾದನಾ ಕ್ಷೇತ್ರಗಳಾದ ಪೌಲ್ಟ್ರಿ, ಮೀನುಗಾರಿಕೆ, ಕೃಷಿ ಮತ್ತು ಹೈನುಗಾರಿಕೆಗೆ ಕಡಿಮೆ ದರದಲ್ಲಿ ಸಾಲ ಒದಗಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.