ಕಾಯಕ ಯೋಗಿ ಬಸವಣ್ಣನ ಬಗ್ಗೆ ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
ನಮ್ಮ ಸರ್ಕಾರವು ಭಗವಾನ್ ಬಸವಣ್ಣನವರ ಬೋಧನೆಗಳನ್ನು ಅಳವಡಿಸಿಕೊಂಡು, `ಕಾಯಕವೇ ಕೈಲಾಸ` ತತ್ವವನ್ನು ಪಾಲಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಬಳಿಕ ಎರಡನೆ ಅವಧಿಗೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಬಳಿಕ ಶುಕ್ರವಾರ 2019-20ರ ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಯಕ ಯೋಗಿ ಬಸವಣ್ಣನವರ ಬಗ್ಗೆ ಪ್ರಸ್ತಾಪಿಸಿದರು.
"ನಮ್ಮ ಸರ್ಕಾರವು ಭಗವಾನ್ ಬಸವಣ್ಣನವರ ಬೋಧನೆಗಳನ್ನು ಅಳವಡಿಸಿಕೊಂಡು, 'ಕಾಯಕವೇ ಕೈಲಾಸ' ತತ್ವವನ್ನು ಪಾಲಿಸುತ್ತದೆ" ಎಂದು ಹೇಳಿದರು.
ಬಸವಣ್ಣನವರು 12 ನೇ ಶತಮಾನದ ಸಾಮಾಜ ಸುಧಾರಕ ಮತ್ತು ಚಿಂತಕರಾಗಿದ್ದು, ಅವರು ಮೊದಲು 'ಕಲ್ಯಾಣ ರಾಜ್ಯ' ಎಂಬ ಪರಿಕಲ್ಪನೆಯನ್ನು ಸ್ಥಾಪಿಸಿದರು. ಅವರ ಆಲೋಚನೆಗಳು ಭಾರತೀಯ ಸಮಾಜದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟುಹಾಕಿದವು. 'ಸರ್ವೋದಯ' ಮತ್ತು 'ಸರ್ವಕ್ರಾಂತಿ'ಯ ಆಧುನಿಕ ಪರಿಕಲ್ಪನೆಗಳ ಬೀಜಗಳನ್ನು ಬಿತ್ತಿದರು. ವರ್ಗ, ಜಾತಿ, ಮತ ಮತ್ತು ಲಿಂಗವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಸಮಾನ ಸ್ಥಾನಮಾನಕ್ಕಾಗಿ ಅವರು ಹೋರಾಡಿದವರು.
ಬಸವಣ್ಣನವರು 'ಕಾಯಕ' ಮತ್ತು 'ದಾಸೋಹ' ಎಂಬ ಎರಡು ಸಾಮಾಜಿಕ-ಆರ್ಥಿಕ ತತ್ವಗಳು ಹೆಚ್ಚು ಪ್ರಸಿದ್ಧವಾಗಿದ್ದು, ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಹತ್ತಿರದಿಂದ ಗಮನಿಸಿದ ಅವರು, ವಚನಗಳ ಮೂಲಕ ಸಾಮಾಜಿಕ ದುಷ್ಕೃತ್ಯಗಳ ವಿರುದ್ಧ ಆಂದೋಲನ ಆರಂಭಿಸಿದರು, ಶ್ರೀಮಂತ ಮತ್ತು ಬಡವರ ನಡುವಿನ ಅಂತರ, ಅಸ್ಪೃಶ್ಯತೆ ಮತ್ತು ತಾರತಮ್ಯದ ವಿರುದ್ಧವೂ ಅವರು ಧ್ವನಿ ಎತ್ತಿದವರು ಕಾಯಕ ಯೋಗಿ ಬಸವಣ್ಣ.