ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ-2019ರ ವೇಳೆ ಸಂಭವಿಸಿದ ಅಗ್ನಿ ಅವಘಡ ಸಂಬಂಧ ಘಟನಾ ಸ್ಥಳಕ್ಕೆ ಇಂದು ಭೇಟಿ ನೀಡಿದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪೂರ್ಣ ಮಾಹಿತಿ ಪಡೆದರು.


COMMERCIAL BREAK
SCROLL TO CONTINUE READING

ಇದೇ ಸಂದರ್ಭದಲ್ಲಿ ಕಾರು ಮಾಲೀಕರೊಂದಿಗೂ ಮಾತನಾಡಿದ ನಿರ್ಮಲಾ ಸೀತಾರಾಮನ್, ಕಾರುಗಳ ಒಟ್ಟು ಮೌಲ್ಯದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈಗಾಗಲೇ ಘಟನೆ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಅಗ್ನಿಶಾಮಕ ಆಯುಕ್ತರು, ಯಲಹಂಕ ಪೊಲೀಸರು ಸ್ಥಳ‌ ಮಹಜರು ನಡೆಸಿ ತನಿಖೆ ನಡೆಸುತ್ತಿದ್ದಾರೆ.



ಅಷ್ಟೇ ಅಲ್ಲದೆ, ಪ್ರಕರಣ ಸಂಬಂಧ ಕಾರು ಮಾಲೀಕರು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನೂ ಯಲಹಂಕ ಪೊಲೀಸರು ದಾಖಲಿಸಿಕೊಳ್ಳಲಿದ್ದಾರೆ. ಸಿಗರೇಟ್ ಸೇದಿ ಎಸೆದ ಕಿಡಿ ಹೊತ್ತಿಕೊಂಡ ಪರಿಣಾಮ ಈ ಘಟನೆ ಜರುಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮತ್ತೊಂದೆಡೆ ಶಾರ್ಟ್ ಸರ್ಕ್ಯೂಟ್'ನಿಂದ ಬೆಂಕಿ ಹುಲ್ಲಿಗೆ ತಗುಲಿ, ಬಳಿಕ ಕಾರುಗಳು ಹೊತ್ತಿಕೊಂಡು ಅವಘಡ ಸಂಭವಿಸಿರಬಹುದು ಎನ್ನಲಾಗುತ್ತಿದೆ. 


ಯಲಹಂಕ ವಾಯುನೆಲೆಯಲ್ಲಿ ಶನಿವಾರ ನಡೆದ ವೈಮಾನಿಕ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷರು ಆಗಮಿಸಿದ್ದರು. ಅಂತೆಯೇ ಪಾರ್ಕಿಂಗ್ ಲಾಟ್ ನಲ್ಲೂ 500ಕ್ಕೂ ಹೆಚ್ಚು ವಾಹನಗಳನ್ನು ನಿಲ್ಲಿಸಲಾಗಿತ್ತು. ಈ ವೇಳೆ ಸುಮಾರು 300ಕ್ಕೂ ಅಧಿಕ ವಾಹನಗಳಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡಿದ್ದು. ಸುಮಾರು 272 ಕಾರುಗಳು ಬೆಂಕಿಗಾಹುತಿಯಾಗಿದ್ದವು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.


ಈಗಾಗಲೇ ಕಾರು ಕಳೆದುಕೊಂಡವರಿಗೆ ವಿಮಾ ಪರಿಹಾರ ದೊರಕಿಸಿಕೊಡಲು ವ್ಯವಸ್ಥೆ ಮಾಡಲಾಗಿದ್ದು, ವಾಹನಗಳ ವಿವರ ಪಡೆಯಲು ಕಾರು ಮಾಲೀಕರಿಗೆ ಪೊಲೀಸ್ ಇಲಾಖೆ  ಸಹಾಯವಾಣಿಯನ್ನೂ ಆರಂಭಿಸಿದೆ.