ಮುಂಬೈ: ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ
ಕಡಿಮೆ ಸಕ್ಕರೆ ಪ್ರಮಾಣದಿಂದ ಆರೋಗ್ಯದಲ್ಲಿ ಏರುಪೇರಾಗಿತ್ತು ಎಂಬುದು ವೈದ್ಯಕೀಯ ತಪಾಸಣೆ ಬಳಿಕ ತಿಳಿದುಬಂದಿದೆ.
ಮುಂಬಯಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ವೇದಿಯಲ್ಲೇ ಕುಸಿದು ಬಿದ್ದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಇಲ್ಲಿನ ಅಹ್ಮದ್‌ನಗರದಲ್ಲಿರುವ ಮಹಾತ್ಮಾ ಪುಲೆ ಕೃಷಿ ವಿದ್ಯಾಪೀಠದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿತಿನ್ ಗಡ್ಕರಿ ಅವರು, ವೇದಿಕೆಯಲ್ಲಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲು ಎದ್ದು ನಿಂತಾಗ ಸಚಿವ ಗಡ್ಕರಿ ಕುಸಿದು ಬಿದ್ದಿದ್ದಾರೆ. ಕೂಡಲೇ ಪಕ್ಕದಲ್ಲಿದ್ದ ಮಹಾರಾಷ್ಟ್ರ ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಮತ್ತು ಭದ್ರತಾ ಸಿಬ್ಬಂದಿಗಳು ಗಡ್ಕರಿ ಅವರನ್ನು ಮೇಲಕ್ಕೆತ್ತಿ ಉಪಚರಿಸಿದ್ದಾರೆ.
ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ತಪಾಸಣೆ ಬಳಿಕ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಅಲ್ಲಿಂದ ಗಡ್ಕರಿ ಅವರು ಶಿರಡಿಗೆ ತೆರಳಿದ್ದಾರೆ.
ತಮ್ಮ ಆರೋಗ್ಯ ಪರಿಸ್ಥಿತಿ ಬಗ್ಗೆ ಸ್ವತಃ ನಿತಿನ್ ಗಡ್ಕರಿ ಅವರೇ ಟ್ವೀಟ್ ಮಾಡಿದ್ದು, "ಕಡಿಮೆ ಸಕ್ಕರೆ ಪ್ರಮಾಣದಿಂದ ಆರೋಗ್ಯದಲ್ಲಿ ಏರುಪೇರಾಗಿತ್ತು. ವೈದ್ಯಕೀಯ ಚಿಕಿತ್ಸೆ ಬಳಿಕ ಆರೋಗ್ಯ ಸುಧಾರಿಸಿದೆ. ಎಲ್ಲರ ಹಾರೈಕೆಗೆ ಧನ್ಯವಾದಗಳು" ಎಂದಿದ್ದಾರೆ.