ನವದೆಹಲಿ: ಬಿಜೆಪಿ ಎಚ್ಚರಿಕೆಯ ನಡುವೆಯೂ ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜೀ ಆಯೋಜಿಸಿದ್ದ ಸಂಯುಕ್ತ ಭಾರತಕ್ಕಾಗಿ ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಮೂಲಕ ಶತ್ರುಘ್ನ ಸಿನ್ಹಾ ಈಗ ಮತ್ತೆ ತಮ್ಮ ಪಕ್ಷದ ವಿರುದ್ದವೇ ಕಿಡಿ ಕಾರಿದ್ದಾರೆ.


COMMERCIAL BREAK
SCROLL TO CONTINUE READING

ಶನಿವಾರದಂದು ರಾಷ್ಟ್ರದ ಪ್ರಮುಖ ಪ್ರಾದೇಶಿಕ ನಾಯಕರ ಸಮ್ಮುಖದಲ್ಲಿ ವೇದಿಕೆ ಹಂಚಿಕೊಂಡ ಶತ್ರುಘ್ನ ಸಿನ್ಹಾ ಈಗ ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಈ ಕುರಿತಾಗಿ ತಮ್ಮ ಸರಣಿ ಟ್ವೀಟ್ ಗಳ ಮೂಲಕ ರ‍್ಯಾಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಎಂತಹ ಅದ್ಬುತ ಪಾಲ್ಗೊಳ್ಳುವಿಕೆ ಬೆಂಗಾಳದಲ್ಲಿ ಲಕ್ಷಾಂತರ ಜನರು ಪರಿವರ್ತನೆಗಾಗಿ ಸ್ವಯಂಪ್ರೇರಣೆಯಿಂದ ಬಂದಿದ್ದಾರೆ"ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.ನಂತರ ಇಂತಹ ಒಂದು ವೇದಿಕೆಯನ್ನು ಕಲ್ಪಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಅವರ ಕುರಿತಾಗಿ ಸಿನ್ಹಾ ಮೆಚ್ಚುಗೆ ಸುರಿಮಳೆ ಸುರಿಸಿದರು.



"ನಮ್ಮ ಸಹೋದರಿ ಬೆಂಗಾಳದ ಗ್ರೇಟ್ ಲೇಡಿ ಮಮತಾ ದಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ದೇಶದ ಎಲ್ಲ ಭಾಗಗಳಿಂದಲೂ ಪ್ರಬಲ ಮತ್ತು ಶಕ್ತಿಶಾಲಿ ರಾಜಕೀಯ ಮನಸ್ಸುಗಳು ಹಾಗೂ ನಾಯಕರನ್ನು ಇಂತಹ ಒಂದು ವೇದಿಕೆಯಲ್ಲಿ ತಂದಿದ್ದಕ್ಕೆ ಅವರಿಗೆ ಧನ್ಯವಾದಗಳನ್ನು ಅರ್ಪಿಸಬೇಕಾಗಿದೆ" ಎಂದರು.ಈ ಹಿಂದಿನಿಂದಲೂ ತಮ್ಮ ಪಕ್ಷದ ನಾಯಕರ ವಿರುದ್ದ ಟೀಕೆ ಮಾಡುವ ಕಾರಣಕ್ಕಾಗಿ ಬಿಜೆಪಿ ನಾಯಕರಿಂದ ಟೀಕೆಗೆ ಗುರಿಯಾಗಿದ್ದ ಶತ್ರುಘ್ನ ಸಿನ್ಹಾ ಈಗ ಮತ್ತೆ ಸಂಯುಕ್ತ ಭಾರತಕ್ಕಾಗಿ ರ‍್ಯಾಲಿಯಲ್ಲಿ ಭಾಗಿಯಾಗಿ ತಮ್ಮ ಪಕ್ಷದ ವಿರುದ್ದವೇ ಬಂಡಾಯದ ಕಹಳೆ ಮೊಳಗಿಸಿದ್ದಾರೆ.  



ಶನಿವಾರದಂದು ನಡೆದ ರ‍್ಯಾಲಿಯಲ್ಲಿ ಸುಮಾರು 22 ಪ್ರತಿಪಕ್ಷಗಳ ನಾಯಕರು ನರೇಂದ್ರ ಮೋದಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದರು.