ಲಕ್ನೋ: ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿಯಿಂದ ಹೊರಬಂದ ಬಳಿಕ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಮಂಗಳವಾರ ಪಕ್ಷದ ಪರಿಶೀಲನಾ ಸಭೆ ನಡೆಸಿದರು. 


COMMERCIAL BREAK
SCROLL TO CONTINUE READING

ಪಕ್ಷದ ಮುಖ್ಯಸ್ಥ ಮಾಯಾವತಿ ಅವರು 17 ಮಂದಿ ಹಿಂದುಳಿದ ಜಾತಿಗಳನ್ನು ಒಬಿಸಿಯಿಂದ ತೆಗೆದುಹಾಕಿ ಎಸ್‌ಸಿಗೆ ಸೇರ್ಪಡೆ ಮಾಡುವ ಯೋಗಿ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಸಾರ್ವಜನಿಕರ ಬಳಿ ಹೋಗುವಂತೆ ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.


ಯೋಗಿ ಸರ್ಕಾರದ ಈ ನಿರ್ಧಾರವನ್ನು ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದಿರುವ ಮಾಯಾವತಿ ಅವರು, ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಕಾರ್ಯತಂತ್ರದ ಬಗ್ಗೆ ಹಾಗೂ ಉತ್ತರ ಪ್ರದೇಶದ 12 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುದರ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿದ್ದಾರೆ.


ಮಾಹಿತಿಯ ಪ್ರಕಾರ, ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಅತಿಹೆಚ್ಚು ಮುಸ್ಲಿಂ ಮತಗಳನ್ನು ಪಡೆದುಕೊಂಡಿರುವುದಾಗಿ ಸಭೆಯಲ್ಲಿ ತಿಳಿಸಿದ ಮಾಯಾವತಿ ಅವರು, ಈ ಕಾರಣಕ್ಕಾಗಿ, ಮುಸ್ಲಿಂ ಮತದಾರರನ್ನು ಪಕ್ಷಕ್ಕೆ ಸೆಳೆಯಲು ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರೊಂದಿಗೆ ಎಸ್‌ಸಿ ಮತ್ತು ಒಬಿಸಿ ಜಾತಿಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. 


ಉತ್ತರ ಪ್ರದೇಶದ 12 ವಿಧಾನಸಭಾ ಸ್ಥಾನಗಳಾದ ಸಹರಾನ್ಪುರದ ಗಂಗೋಹ್, ಆಲಿಗಢದ ಇಗ್ಲಾಸ್, ಕಾನ್ಪುರದ ಗೋವಿಂದನಗರ್, ಫಿರೋಜಾಬಾದ್‌ನ ಟುಡ್ಲಾ, ಲಕ್ನೋದ ಕ್ಯಾಂಟ್, ಬರಾಬಂಕಿಯ ಜೈದ್‌ಪುರ, ಚಿತ್ರಕೂಟ್‌ನ ಮಾಣಿಕ್ಪುರ, ಬಹ್ರೈಚ್‌ನ ಬಹ್ಲಾ, ಅಂಬೇಡ್ಕರ್ ನಗರದ ಜಲಾಲ್‌ಪುರ ಮತ್ತು ಪ್ರತಾಪ್‌ಗಢ, ಹಮೀರ್‌ಪುರ ಮತ್ತು ರಾಂಪುರ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.