ಉತ್ತರ ಪ್ರದೇಶ: ಶಾಲೆಯ ಕಾಂಪೌಂಡ್ ಬಳಿ ಪ್ರಬಲ ಸ್ಫೋಟ!
ಪ್ರಬಲ ಸ್ಫೋಟದಿಂದಾಗಿ ಗೋಡೆ ಬಿರುಕು ಬಿಟ್ಟಿದ್ದು ಯಾವುದೇ ತೊಂದರೆಯಾದ ಬಗ್ಗೆ ವರದಿಯಾಗಿಲ್ಲ.
ಗೊಂಡಾ: ಗೊಂಡಾ ಜಿಲ್ಲೆಯ ಬಂಗಾಂವ್ ಗ್ರಾಮದ ಖಾಸಗಿ ಶಾಲೆಯ ಕಾಂಪೌಂಡ್ ಬಳಿ ಸೋಮವಾರ ಪ್ರಬಲ ಸ್ಫೋಟ ಸಂಭವಿಸಿದೆ ಎಂದು ಪೊಲೀಸರುತಿಳಿಸಿದ್ದಾರೆ. ಪ್ರಬಲ ಸ್ಫೋಟದಿಂದಾಗಿ ಗೋಡೆ ಬಿರುಕು ಬಿಟ್ಟಿದ್ದು ಯಾವುದೇ ತೊಂದರೆಯಾದ ಬಗ್ಗೆ ವರದಿಯಾಗಿಲ್ಲ.
"ಜುಲೈ 21 ರಂದು ಮುಂಜಾನೆ 3 ಗಂಟೆಗೆ ಶಾಲೆಯೊಂದರ ಕಾಂಪೌಂಡ್ ಬಳಿ ಬಾಂಬ್ ಸ್ಫೋಟಗೊಂಡಿದೆ ಎಂದು ಗೊಂಡಾ ಜಿಲ್ಲೆಯ ಬ್ರೈಟ್ ಫ್ಯೂಚರ್ ಶಾಲೆಯ ಸಂಸ್ಥಾಪಕ ಶಂಶರ್ ಅಹ್ಮದ್ ನಮಗೆ ಮಾಹಿತಿ ನೀಡಿದ್ದಾರೆ" ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಮಹೇಂದ್ರ ಕುಮಾರ್ ತಿಳಿಸಿದ್ದಾರೆ.
ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಡಿಟೋನೇಟರ್, ಜೆಲಾಟಿನ್ ರಾಡ್, 400 ಮೀಟರ್ ತಂತಿ, ಬ್ಯಾಟರಿ ಬಾಕ್ಸ್ ಮತ್ತು ಒಂದು ಚೀಲವನ್ನು ಪತ್ತೆ ಮಾಡಿದೆ ಎಂದು ಕುಮಾರ್ ಹೇಳಿದರು.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 436 (ಬೆಂಕಿ ಅಥವಾ ಸ್ಫೋಟಕ ವಸ್ತುವಿನಿಂದ ಕಿಡಿಗೇಡಿತನ) ಮತ್ತು ಸ್ಫೋಟಕ ಕಾಯ್ದೆಯ ಇತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ತಂಡವನ್ನು ರಚಿಸಲಾಗಿದೆ ಎಂದು ಕುಮಾರ್ ತಿಳಿಸಿದ್ದಾರೆ.