ಪಾಕಿಸ್ತಾನದ ಜೈಶ್ ಉಗ್ರ ಸಂಘಟನೆ ವಿರುದ್ಧದ ಭಾರತದ ಕ್ರಮಕ್ಕೆ ಅಮೇರಿಕಾ ಬೆಂಬಲ
ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿರುವ ಬೆನ್ನಲ್ಲೇ ಅಮೇರಿಕಾ ಭಾರತಕ್ಕೆ ತನ್ನ ಬೆಂಬಲ ವ್ಯಕ್ತಪಡಿಸಿದೆ.
ನವದೆಹಲಿ: ಪಾಕಿಸ್ತಾನದಲ್ಲಿ ಜೆಇಎಂ ಭಯೋತ್ಪಾದನಾ ಶಿಬಿರಗಳ ವಿರುದ್ಧ ಕ್ರಮ ಕೈಗೊಳ್ಳುವ ಭಾರತದ ನಿರ್ಧಾರವನ್ನು ಯುಎಸ್ ಬೆಂಬಲಿಸುತ್ತದೆ ಎಂದು ಅಮೇರಿಕಾ ಕಾರ್ಯದರ್ಶಿ ಮೈಕ್ ಪೊಂಪೆಯೊ ಎನ್ಎಸ್ಎ ಅಜಿತ್ ಡೊವಲ್ಗೆ ತಿಳಿಸಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಫೆಬ್ರವರಿ 27ರಂದು ಕಾಣೆಯಾಗಿರುವ ಭಾರತದ ಪೈಲೆಟ್ ಪಾಕಿಸ್ತಾನದ ವಶದಲ್ಲಿರುವುದಾಗಿ ಭಾರತ ದೃಢಪಡಿಸಿದ್ದು, ಕೂಡಲೇ ಆತನ ಸುರಕ್ಷಿತ ಹಿಂದಿರುಗುವಿಕೆಗೆ ಭಾರತ ಒತ್ತಾಯಿಸಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿರುವ ಬೆನ್ನಲ್ಲೇ ಅಮೇರಿಕಾ ಭಾರತಕ್ಕೆ ತನ್ನ ಬೆಂಬಲ ವ್ಯಕ್ತಪಡಿಸಿದೆ.
ಪುಲ್ವಾಮಾದ ಆವಂತಿಪುರದಲ್ಲಿ ಸೇನಾ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿ, 40ಕ್ಕೂ ಹೆಚ್ಚು ಯೋಧರನ್ನು ಬಲಿ ಪಡೆದಿದ್ದ ಪಾಕಿಸ್ತಾನದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ವಿರುದ್ಧ ಭಾರತೀಯ ವಾಯುಪಡೆ ಮಂಗಳವಾರ ಪ್ರತೀಕಾರ ತೀರಿಸಿಕೊಂಡಿತ್ತು. ಗಡಿ ನಿಯಂತ್ರಣ ರೇಖೆ ದಾಟಿ ಸುಮಾರು 85 ಕಿ.ಮೀ. ಒಳನುಗ್ಗಿದ 12 ಮಿರಾಜ್ -2000 ಯುದ್ಧ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರ ಮಾತ್ರವಲ್ಲದೇ, ಪಾಕಿಸ್ತಾನ ಗಡಿ ಒಳಗಿದ್ದ ಜೈಶ್ ಉಗ್ರರ ಪ್ರಮುಖ ತರಬೇತಿ ಕೇಂದ್ರವನ್ನೂ ನಾಶಗೊಳಿಸಿ, JeMನ ತರಬೇತಿ ಪಡೆದಿದ್ದ ಕನಿಷ್ಠ 42 ಆತ್ಮಹತ್ಯಾ ಬಾಂಬರ್ಗಳನ್ನು ಹತ್ಯೆ ಮಾಡಿತ್ತು.