ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ತಮ್ಮ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಬಹುನಿರೀಕ್ಷಿತ ಮಂತ್ರಿಮಂಡಲ ಪುನರ್ರಚನೆಗೆ ಆಹ್ವಾನಗಳನ್ನು ಈಗಾಗಲೇ ಕಳುಹಿಸಲಾಗಿದೆ.


COMMERCIAL BREAK
SCROLL TO CONTINUE READING

ಯೋಗಿ ಸಂಪುಟ ಪುನರ್ರಚನೆಯಲ್ಲಿ ಯುವ/ನೂತನ ಸಚಿವರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಹಲವು ಹಿರಿಯ ನಾಯಕರು ತಮ್ಮ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


ಹಣಕಾಸು ಸಚಿವ ರಾಜೇಶ್ ಅಗರ್ವಾಲ್ ಮಂಗಳವಾರ ಮಧ್ಯಾಹ್ನ ತಮ್ಮ ರಾಜೀನಾಮೆಯನ್ನು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕವಾಗಿರುವ ಸಾರಿಗೆ ಸಚಿವ ಸ್ವತಂತ್ರ ದೇವ್ ಸಿಂಗ್ ಸೋಮವಾರ ತಮ್ಮ ರಾಜೀನಾಮೆ ಸಲ್ಲಿಸಿದ್ದರು.


ಇವರಲ್ಲದೆ, ಚೇತನ್ ಚೌಹಾನ್, ಅನುಪಮಾ ಜೈಸ್ವಾಲ್, ಮುಕುತ್ ಬಿಹಾರಿ ವರ್ಮಾ ಮತ್ತು ಸ್ವಾತಿ ಸಿಂಗ್ ಕೂಡ ತಮ್ಮ ಸಿಎಂಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರಬಂದಿಲ್ಲ. ಉತ್ತರಪ್ರದೇಶ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಐವರು ಮಂತ್ರಿಗಳಾದ - ಹಣಕಾಸು ಸಚಿವ ರಾಜೇಶ್ ಅಗರ್ವಾಲ್, ಸಾರಿಗೆ ಸಚಿವ ಸ್ವತಂತ್ರ ದೇವ್ ಸಿಂಗ್, ಅರ್ಚನ ಪಾಂಡೆ, ಅನುಪಮ ಜೈಸ್ವಾಲ್ ಮತ್ತು ಧರಂಪಾಲ್ ಸಿಂಗ್ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.


ಮೂಲಗಳ ಪ್ರಕಾರ ಕಳೆದ ಎರಡು ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಈ ಸಚಿವರು ನಿರೀಕ್ಷಿತ ಮಟ್ಟದಲ್ಲಿ ಸರಾಸರಿ ಸಾಧನೆ ಮಾಡದೇ ಇರುವ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರ ಸೂಚನೆ ಮೇರಿಗೆ ಹಲವು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


ಈ ಮೊದಲು ಸೋಮವಾರ ನಿಗದಿಯಾಗಿದ್ದ ಸಂಪುಟ ಪುನರ್ರಚನೆಯನ್ನು ಕೇಂದ್ರ ಸರ್ಕಾರದ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಸ್ಥಿತಿ ಗಂಭೀರವಾಗಿದ್ದ ಕಾರಣ ಮುಂದೂಡಲಾಗಿತ್ತು.