ಎರಡಕ್ಕಿಂತ ಅಧಿಕ ಮಕ್ಕಳಿದ್ದರೆ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ!
ಪಂಚಾಯತ್ ಚುನಾವಣೆಗೂ ಮೊದಲು ದೊಡ್ಡ ಬದಲಾವಣೆಗೆ ಸಿದ್ಧತೆ ನಡೆಸಿದ ಉತ್ತರಾಖಂಡ್.
ಉತ್ತರಾಖಂಡ್: ಪಂಚಾಯತ್ ಚುನಾವಣೆಗೂ ಮೊದಲು ದೊಡ್ಡ ಬದಲಾವಣೆಗೆ ಸಿದ್ಧತೆ ನಡೆಸಿದ ಉತ್ತರಾಖಂಡ್ ಎರಡಕ್ಕಿಂತ ಅಧಿಕ ಮಕ್ಕಳಿರುವವರಿಗೆ ಪಂಚಾಯತ್ ಚುನಾವಣೆಗೆ ಟಿಕೆಟ್ ನೀಡದಿರುವ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಕೂಡ ಕೆಲವೊಂದು ಬದಲಾವಣೆ ಮಾಡಲು ಮುಂದಾಗಿದೆ.
ಇದಕ್ಕಾಗಿ ರಾಜ್ಯ ಸರ್ಕಾರ ಪಂಚಾಯತಿರಾಜ್ (ತಿದ್ದುಪಡಿ) ಕಾಯ್ದೆ 2019 ಅನ್ನು ವಿಧಾನಸಭೆಯಿಂದ ಅಂಗೀಕರಿಸಿದೆ. ಈಗ ಕಾಯ್ದೆ ರಾಜ್ಯಪಾಲರ ಅಂಗಳದಲ್ಲಿದ್ದು ಮಸೂದೆ ಅಂಗೀಕಾರವಾದರೆ ಹೊಸ ನಿಯಮದಂತೆ ಮುಂದಿನ ಪಂಚಾಯತ್ ರಾಜ್ ಚುನಾವಣೆ ನಡೆಯಲಿದೆ. ಸುಮಾರು 50 ಸಾವಿರ ಪಂಚಾಯತ್ ಪ್ರತಿನಿಧಿಗಳನ್ನು ಚುನಾವಣೆಯಿಂದ ಆಯ್ಕೆ ಮಾಡಲಾಗುತ್ತದೆ.
ಪಂಚಾಯತಿ ರಾಜ್ ಕಾಯ್ದೆಯ ತಿದ್ದುಪಡಿ ಮಸೂದೆ ಜಾರಿಗೆ ಬಂದರೆ ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಅಭ್ಯರ್ಥಿ ಯಾವುದೇ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸ ಬಯಸುವ ಅಭ್ಯರ್ಥಿ ನಿರ್ದಿಷ್ಟ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ. ಗಮನಾರ್ಹವಾಗಿ ಚುನಾವಣೆಗೆ ಸ್ಪರ್ಧಿಸಲು ಶೈಕ್ಷಣಿಕ ಅರ್ಹತೆ ಬಗ್ಗೆ ನ್ಯಾಯಾಂಗ ಇಲಾಖೆಯಿಂದ ಅಭಿಪ್ರಾಯ ಕೋರಲಾಗಿದೆ.
ಸರ್ಕಾರದ ಈ ನಿರ್ಧಾರವನ್ನು ಗ್ರಾಮಸ್ಥರು, ಸ್ಥಳೀಯ ಜನರು ಸೇರಿದಂತೆ ಶ್ರೀನಗರದ ಜನತೆ ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ. ವಿದ್ಯಾವಂತ ಅಭ್ಯರ್ಥಿಯ ಕೈಯಲ್ಲಿ ಆಡಳಿತ ಸಿಕ್ಕರೆ ಅದರಿಂದ ಗ್ರಾಮಗಳು ಅಭಿವೃದ್ಧಿಯಾಗುತ್ತವೆ ಎಂದು ಹಲವು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೂ ಕೆಲವರು ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವ ಮದನ್ ಕೌಶಿಕ್ ಸದನದಲ್ಲಿ ಈ ಮಸೂದೆಯನ್ನು ಮಂಡಿಸಿದರು. ಇಲ್ಲಿಯವರೆಗೆ, ಉತ್ತರಾಖಂಡಕ್ಕೆ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಶೈಕ್ಷಣಿಕ ಅರ್ಹತೆ ಅಥವಾ ಕುಟುಂಬ ಸಂಬಂಧಿತ ಯಾವುದೇ ಮಿತಿ ಇರಲಿಲ್ಲ, ಆದರೆ ಈ ತಿದ್ದುಪಡಿಯ ನಂತರ, ಈಗ ಪಂಚಾಯತ್‌ನಲ್ಲಿ ಯಾವುದೇ ಹುದ್ದೆಗೆ ಸ್ಪರ್ಧಿಸಲು ಕನಿಷ್ಠ ಶೈಕ್ಷಣಿಕ ಅರ್ಹತೆ ಹತ್ತನೇ ಉತ್ತೀರ್ಣತೆ ಹೊಂದಿರಬೇಕು. ಆದರೆ, ಮಹಿಳೆ, ಎಸ್‌ಸಿ-ಎಸ್‌ಟಿ ವರ್ಗಕ್ಕೆ ಇದರಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು.