ಜೀವನದ ಪ್ರತಿ ಕ್ಷಣವನ್ನೂ ವಾಜಪೇಯಿ ದೇಶಕ್ಕಾಗಿ ಮುಡಿಪಾಗಿಟ್ಟಿದ್ದರು: ಪ್ರಧಾನಿ ಮೋದಿ
ದೇಶದ ಮೆಚ್ಚಿನ ರಾಜಕಾರಣಿ, ನಾಯಕ್ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದಿಂದ ಇಡೀ ದೇಶವೇ ದುಃಖಿತವಾಗಿದೆ: ಪ್ರಧಾನಿ ಮೋದಿ
ನವದೆಹಲಿ: ಭಾರತ ರತ್ನ, ಅಜಾತ ಶತ್ರು ಎಂದೇ ಖ್ಯಾತರಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಜೀವನದ ಪ್ರತಿಯೊಂದು ಕ್ಷಣವನ್ನೂ ದೇಶಕ್ಕಾಗಿ ಮುಡಿಪಾಗಿಟ್ಟಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, ಬಲಿಷ್ಠವಾದ, ಸಮೃದ್ಧವಾದ ಮತ್ತು ಅಭಿವೃದ್ಧಿಯನ್ನೊಳಗೊಂಡ ಭಾರತಕ್ಕಾಗಿ ಅಡಿಪಾಯ ಹಾಕಿದ 21ನೇ ಶತಮಾನದ ಅತ್ಯುತ್ತಮ ನಾಯಕ ಅಟಲ್ ಬಿಹಾರಿ ವಾಜಪೇಯಿ. ಎಲ್ಲಾ ಕ್ಷೇತ್ರಗಳಲ್ಲಿ ಅವರು ರೂಪಿಸಿದ ಭವಿಷ್ಯದ ನೀತಿಗಳು ದೇಶದ ಪ್ರತಿಯೊಬ್ಬ ಪ್ರಜೆಯನ್ನೂ, ಜೀವನವನ್ನೂ ತಲುಪಿದೆ ಎಂದು ಮೋದಿ ಶ್ಲಾಘಿಸಿದ್ದಾರೆ.
ಮುಂದುವರೆದು, "ಅಟಲ್ ಜೀ ಅವರ ನಿಧನ ವೈಯಕ್ತಿಕವಾಗಿ ಮತ್ತು ದೇಶಕ್ಕೆ ಭರಿಸಲಾಗದ ನಷ್ಟವಾಗಿದೆ. ನಾನು ಅವರೊಂದಿಗಿದ್ದ ಹಲವು ನೆನಪುಗಳು ಇನ್ನೂ ಜೀವಂತವಾಗಿವೆ. ನನ್ನನ್ನೂ ಒಳಗೊಂಡಂತೆ ಎಲ್ಲಾ ಕಾರ್ಯಕರ್ತರಿಗೂ ಅವರು ಸ್ಫೂರ್ತಿ. ಪ್ರತಿಯೊಂದು ವಿಚಾರದಲ್ಲಿಯೂ ಅವರ ನೈಪುಣ್ಯತೆಯನ್ನು ನಾನು ಇಂದಿಗೂ ನೆನೆಯುತ್ತೇನೆ" ಎಂದಿದ್ದಾರೆ.
ದೇಶದ ಮೆಚ್ಚಿನ ರಾಜಕಾರಣಿ, ನಾಯಕ್ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದಿಂದ ಇಡೀ ದೇಶವೇ ದುಃಖಿತವಾಗಿದೆ. ದಶಕಗಳ ಕಾಲ ದೇಶಕ್ಕಾಗಿ ದುಡಿದಿದ್ದ ಅವರ ನಿಧನದಿಂದ ಒಂದು ಯುಗದ ಅಂತ್ಯದಂತಾಗಿದೆ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ಬಿಜೆಪಿ ಕಾರ್ಯಕರ್ತರಿಗೆ, ಅವರ ಅಭಿಮಾನಿಗಳಿಗೆ ಮತ್ತು ಕುಟುಂಬಕ್ಕೆ ದಯಪಾಲಿಸಲಿ ಎಂದು ಪ್ರಧಾನಿ ಹೇಳಿದ್ದಾರೆ.
ದೇಶಕಂಡ ಅತ್ಯುತ್ತಮ ನಾಯಕ, ಅಜಾತ ಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುರುವಾರ ಸಂಜೆ 5.05ಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದರು. ಹೃದಯ, ಕಿಡ್ನಿ ಮತ್ತು ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ವಾಜಪೇಯಿ ಅವರನ್ನು ಕ ಜೂ.11ರಂದು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಳೆದ 36 ಗಂಟೆಗಳಿಂದ ವಾಜಪೇಯಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ವಾಜಪೇಯಿ ಅವರಿಗೆ ಕೃತಕ ಉಸಿರಾಟ ವ್ಯವಸ್ಥೆಯಲ್ಲಿಡಲಾಗಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮೃತಪಟ್ಟಿದ್ದಾರೆ ಎಂದು ಏಮ್ಸ್ ಪ್ರಕಟಣೆ ದೃಢಪಡಿಸಿದೆ.