ವಂದೇ ಭಾರತ್ ಎಕ್ಸ್ಪ್ರೆಸ್ ಟಿಕೆಟ್ ದರ ಎಷ್ಟು ಗೊತ್ತೇ?
ಅತಿ ವೇಗದ ಈ ರೈಲಿನ ಎಸಿ ಚೇರ್ ಟಿಕೆಟ್ ದರ 1,850 ರೂ.ಗಳಾದರೆ, ಎಕ್ಸಿಕ್ಯುಟಿವ್ ಕ್ಲಾಸ್ ಟಿಕೆಟ್ ದರ 3,520 ರೂ.ಗಳಾಗಿದೆ.
ನವದೆಹಲಿ: ಬಹುನಿರೀಕ್ಷಿತ ಅತಿ ವೇಗದ ಟ್ರೈನ್ 18 ಅಥವಾ ವಂದೇ ಮಾತರಂ ಎಕ್ಸ್ಪ್ರೆಸ್ ರೈಲಿನ ಟಿಕೆಟ್ ದರವನ್ನು ಭಾರತೀಯ ರೈಲ್ವೆ ಬಹಿರಂಗಗೊಳಿಸಿದೆ.
ನವದೆಹಲಿ-ವಾರಣಾಸಿ ಮಾರ್ಗದಲ್ಲಿ ಚಲಿಸಲಿರುವ ಅತಿ ವೇಗದ ಈ ರೈಲಿನ ಎಸಿ ಚೇರ್ ಟಿಕೆಟ್ ದರ 1,850 ರೂ.ಗಳಾದರೆ, ಎಕ್ಸಿಕ್ಯುಟಿವ್ ಕ್ಲಾಸ್ ಟಿಕೆಟ್ ದರ 3,520 ರೂ.ಗಳಾಗಿದೆ. ಇದರಲ್ಲಿಯೇ ಕೇಟರಿಂಗ್ ಶುಲ್ಕ ಕೂಡ ಸೇರಿದೆ ಎನ್ನಲಾಗಿದೆ. ಹಾಗೆಯೇ ರಿಟರ್ನ್ ಟಿಕೆಟ್ ದರ ಎಸಿ ಚೇರ್ ಕಾರ್ ಗೆ 1,795 ರೂ. ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ ದರ 3,470 ರೂ. ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಈ ಮಾರ್ಗದಲ್ಲಿ ಸಂಚರಿಸುತ್ತಿರುವ ಶತಾಬ್ದಿ ರೈಲಿನ ಟಿಕೆಟ್ ದರಕ್ಕಿಂತಲೂ ಟ್ರೈನ್ 18 ಅಥವಾ ವಂದೇ ಭಾರತ್ ರೈಲಿನ ದರ ಶೇ. 1.4ರಷ್ಟು ಅಧಿಕವಿದೆ ಎನ್ನಲಾಗಿದೆ. ಸದ್ಯ ದೇಶದ ಬಹುನಿರೀಕ್ಷಿತ ಸೆಮಿ ಹೈಸ್ಪೀಡ್ ಟ್ರೈನ್ 18ಗೆ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 15ರಂದು ಹಸಿರು ನಿಶಾನೆ ತೋರಿಸಲಿದ್ದಾರೆ.