ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜುಲೈ 30ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇನ್ನೊಂದು ಆಸಕ್ತಿಕರ ಉಡಾವಣೆಗೆ ಸಿದ್ಧಗೊಳ್ಳುತ್ತಿದೆ. ಜುಲೈ30ರ ಬೆಳಗ್ಗೆ 6:30ಕ್ಕೆ ನಡೆಯುವ ಉಡಾವಣೆಯಲ್ಲಿ, ಪಿಎಸ್ಎಲ್‌ವಿ-ಸಿ56 ರಾಕೆಟ್ ಡಿಎಸ್-ಎಸ್ಎಆರ್ ಉಪಗ್ರಹ ಮತ್ತು ವಿವಿಧ ಗುರಿ ಮತ್ತು ಉದ್ದೇಶಗಳನ್ನು ಹೊಂದಿರುವ ಇನ್ನೂ ಆರು ಪ್ರಮುಖ ಸಹ ಪ್ರಯಾಣಿಕ ಉಪಗ್ರಹಗಳನ್ನು ಹೊತ್ತು ಆಕಾಶಕ್ಕೆ ನೆಗೆಯಲಿದೆ.


COMMERCIAL BREAK
SCROLL TO CONTINUE READING

ಇದು ಪಿಎಸ್ಎಲ್‌ವಿ ರಾಕೆಟ್‌ನ 58ನೇ ಹಾರಾಟವಾಗಿದ್ದು, ಅದರ ಕೋರ್ ಅಲೋನ್ ಸ್ಥಿತಿಯಲ್ಲಿ 17ನೇ ಉಡಾವಣೆಯಾಗಿದೆ. ಕೋರ್ ಅಲೋನ್ ಸಂರಚನೆ ಎಂದರೆ, ಪಿಎಸ್ಎಲ್‌ವಿ ರಾಕೆಟ್ ಅನ್ನು ಅದರ ಆರು ಸ್ಟ್ರಾಪ್ ಆನ್ ಬೂಸ್ಟರ್‌ಗಳ ಹೊರತಾಗಿ ಉಡಾವಣೆಗೊಳಿಸಲಾಗುತ್ತದೆ. ಈ ಸಂರಚನೆಯನ್ನು ಸಣ್ಣ ಪೇಲೋಡ್‌ಗಳ ಉಡಾವಣೆಗಾಗಿ ಬಳಸಲಾಗುತ್ತದೆ.


ಡಿಎಸ್-ಎಸ್ಎಆರ್ ಉಪಗ್ರಹವನ್ನು ಸಿಂಗಾಪುರ ಸರ್ಕಾರದ ಅಂಗಸಂಸ್ಥೆಗಳಾದ ಡಿಎಸ್‌ಟಿಎ ಮತ್ತು ಎಸ್‌ಟಿ ಇಂಜಿನಿಯರಿಂಗ್ ಸಂಸ್ಥೆಗಳು ಸಹಯೋಗದೊಂದಿಗೆ ನಿರ್ಮಿಸಿವೆ. ಈ ಉಪಗ್ರಹ 352 ಕೆಜಿ ತೂಕ ಹೊಂದಿದ್ದು, ಅತ್ಯುತ್ತಮ ಗುಣಮಟ್ಟದ, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಅಭಿವೃದ್ಧಿ ಪಡಿಸಿರುವ ಸಿಂಥೆಟಿಕ್ ಅಪರ್ಚರ್ ರೇಡಾರ್ (ಎಸ್ಎಆರ್) ಪೇಲೋಡನ್ನು ಹೊಂದಿದೆ. ಈ ವಿಶಿಷ್ಟ ಪೇಲೋಡ್ ಮೂಲಕ ಡಿಎಸ್-ಎಸ್ಎಆರ್ ಉಪಗ್ರಹ ಎಂತಹ ಹವಾಮಾನ ಪರಿಸ್ಥಿತಿಯಲ್ಲೂ, ಹಗಲು ರಾತ್ರಿ ಬೇಧವಿಲ್ಲದೆ ಅತ್ಯುತ್ತಮ ಗುಣಮಟ್ಟದ ಛಾಯಾಚಿತ್ರಗಳನ್ನು ತೆಗೆಯಬಲ್ಲದು. ಉಪಗ್ರಹದ ವೈಶಿಷ್ಟ್ಯವಾದ ಒಂದು ಮೀಟರ್ ರೆಸಲ್ಯೂಷನ್ನಿನ ಅತ್ಯುನ್ನತ ಗುಣಮಟ್ಟದ ಛಾಯಾಚಿತ್ರ ಸಾಮರ್ಥ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್‌ಗಳನ್ನು ಕ್ರಾಂತಿಕಾರಕಗೊಳಿಸಲಿದೆ.


ಸಿಂಥೆಟಿಕ್ ಅಪರ್ಚರ್ ರೇಡಾರ್ (ಎಸ್ಎಆರ್)


ಸಿಂಥೆಟಿಕ್ ಅಪರ್ಚರ್ ರೇಡಾರ್ (ಎಸ್ಎಆರ್) ಎನ್ನುವುದು ಒಂದು ಮಾದರಿಯ ರೇಡಾರ್ ತಂತ್ರಜ್ಞಾನವಾಗಿದೆ. ಇದು ರೇಡಾರ್ ಆ್ಯಂಟೆನಾದ ಚಲನೆಯ ಮೂಲಕ ದೊಡ್ಡ ಆ್ಯಂಟೆನಾದ ಫಲಿತಾಂಶವನ್ನು ಉಂಟು ಮಾಡುವ ಮೂಲಕ ಅತ್ಯುತ್ತಮ ಗುಣಮಟ್ಟದ ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತದೆ. ಆದ್ದರಿಂದ ಅದಕ್ಕೆ ಸಿಂಥೆಟಿಕ್ ಅಪರ್ಚರ್ ಎಂಬ ಹೆಸರು ಲಭಿಸಿದೆ. ಅತ್ಯಂತ ಪ್ರತಿಕೂಲಕರ ಹವಾಮಾನದಲ್ಲಿ ಮತ್ತು ಕಡಿಮೆ ಬೆಳಕಿನ ಪರಿಸರದಲ್ಲೂ ಇವುಗಳ ಅತ್ಯುತ್ತಮ ಗುಣಮಟ್ಟದ ಚಿತ್ರ ತೆಗೆಯುವ ಸಾಮರ್ಥ್ಯದಿಂದ ಎಸ್ಎಆರ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್‌ಗಳಲ್ಲಿ ಅತ್ಯಂತ ಮಹತ್ವದ್ದಾಗಿದೆ.


ಇಲ್ಲಿ, ರೇಡಾರ್ ಆ್ಯಂಟೆನಾ ಒಂದು ನಿರ್ದಿಷ್ಟ ಪಥದಲ್ಲಿ ಸಾಗುತ್ತದೆ. ಅದು ಸಾಮಾನ್ಯವಾಗಿ ರೇಡಾರ್ ಅನ್ನು ಸಾಗಿಸುವ ಉಪಗ್ರಹ ಅಥವಾ ವಿಮಾನದ ಪಥವಾಗಿರುತ್ತದೆ. ಈ ಆ್ಯಂಟೆನಾದ ಚಲನೆಯ ಕಾರಣದಿಂದ, ಅದು ದೊಡ್ಡದಾದ ಆ್ಯಂಟೆನಾವನ್ನು ಹೊಂದಿರುವುದಕ್ಕೆ ಸಮಾನವಾಗಿರುತ್ತದೆ. ಈ ಮೂಲಕ, ಎಸ್ಎಆರ್ ಯಾವುದೇ ದೊಡ್ಡದಾದ, ಆದರೆ ಒಂದೆಡೆ ನೆಲೆಯಾಗಿರುವ ಆ್ಯಂಟೆನಾ ಒದಗಿಸುವುದಕ್ಕಿಂತ ಹೆಚ್ಚು ಸ್ಪಷ್ಟವಾದ ಚಿತ್ರಗಳನ್ನು ತೆಗೆಯಬಲ್ಲದಾಗಿದೆ.


ಇದನ್ನೂ ಓದಿ: Rahul Gandhi Marriage: ರಾಹುಲ್ ಗಾಂಧಿ ಮದುವೆಗೆ ಹುಡುಗಿ ಹುಡುಕಿ ಎಂದ ಸೋನಿಯಾ ಗಾಂಧಿ!


ಡಿಎಸ್-ಎಸ್ಎಆರ್ ಉಪಗ್ರಹದ ಪ್ರಮುಖ ಅಂಶವೆಂದರೆ, ಇದನ್ನು ಸಮಭಾಜಕ ವೃತ್ತಕ್ಕೆ 5 ಡಿಗ್ರಿ ಕೋನದಲ್ಲಿರುವ, 535 ಕಿಲೋಮೀಟರ್ ಎತ್ತರದಲ್ಲಿರುವ, ನಿಯರ್ ಈಕ್ವೆಟೋರಿಯಲ್ ಆರ್ಬಿಟ್‌ಗೆ (ಎನ್ಇಒ) ಜೋಡಿಸಲಾಗುತ್ತದೆ. ಎನ್ಇಒ ಭೂಮಿಯ ಮೇಲ್ಮೈಗೆ ಸಾಕಷ್ಟು ಸನಿಹದಲ್ಲಿರುವ ಉಪಗ್ರಹವಾಗಿದೆ. ಈ ಕಕ್ಷೆಯಲ್ಲಿ, ಉಪಗ್ರಹ ಭೂಮಿಯ ಸಮಭಾಜಕ ವೃತ್ತಕ್ಕೆ ಬಹುತೇಕ ಜೋಡಿಸಿದಂತೆ ಚಲಿಸುತ್ತದೆ. ಈ ನಿರ್ದಿಷ್ಟ ಕಕ್ಷೆ ಮತ್ತು ಎತ್ತರದ ಕಾರಣದಿಂದ, ಉಪಗ್ರಹ ಸಿಂಗಾಪುರ ಸರ್ಕಾರದ ವಿವಿಧ ಇಲಾಖೆಗಳಿಗೆ, ಸಂಸ್ಥೆಗಳಿಗೆ ಅಗತ್ಯವಿರುವ ಭೂಮಿಯ ಚಿತ್ರಣವನ್ನು ಒದಗಿಸುತ್ತದೆ. ಇದು ಭೂಮಿಗೆ ಸಾಕಷ್ಟು ಹತ್ತಿರವಾಗಿರುವುದರಿಂದ, ಉಪಗ್ರಹ ಭೂಮಿಯ ಅತ್ಯಂತ ವಿವರಣಾತ್ಮಕ ಚಿತ್ರಗಳನ್ನು ಸೆರೆಹಿಡಿದು, ಆ ಮೂಲಕ ಸಿಂಗಾಪುರಕ್ಕೆ ಅವಶ್ಯಕವಾಗಿದ್ದ ಭೂ ಚಿತ್ರಣದ ಅವಶ್ಯಕತೆಯನ್ನು ಪೂರೈಸುತ್ತದೆ.


ಪಿಎಸ್ಎಲ್‌ವಿ-ಸಿ56 ರಾಕೆಟ್ ಈ ಬಾರಿ ವಿವಿಧ ರೀತಿಯ, ವಿವಿಧ ಸಂಸ್ಥೆಗಳ ಉಪಗ್ರಹಗಳನ್ನು ಹೊತ್ತೊಯ್ಯಲಿದೆ. ಇದು ಬಾಹ್ಯಾಕಾಶ ಅನ್ವೇಷಣೆಯಲ್ಲಿ ತಂಡವಾಗಿ ಕಾರ್ಯ ನಿರ್ವಹಿಸುವ, ಮತ್ತು ಪರಸ್ಪರ ಸಹಕಾರ ನೀಡುವ ಅವಶ್ಯಕತೆಯನ್ನು ಪ್ರತಿಪಾದಿಸುತ್ತದೆ.


6 ಸಹ ಪ್ರಯಾಣಿಕ ಉಪಗ್ರಹಗಳು


1. ಸಿಂಗಾಪುರದ ನಾನ್‌ಯಾಂಗ್ ಟೆಕ್ನಾಲಜಿಕಲ್ ಯುನಿವರ್ಸಿಟಿ (ಎನ್‌ಟಿಯು) ವೆಲಾಕ್ಸ್-ಎಎಂ (VELOX-AM) ಎಂಬ ಹೆಸರಿನ, 23 ಕೆಜಿ ತೂಕದ ಮೈಕ್ರೋ ಉಪಗ್ರಹವನ್ನು ಅಭಿವೃದ್ಧಿ ಪಡಿಸಿದೆ. ಈ ಸಣ್ಣ ಉಪಗ್ರಹ ಎಎಂ - ನಿರ್ಮಿತ ಬಿಡಿಭಾಗಗಳನ್ನು ತನ್ನ ಪೇಲೋಡ್ ಆಗಿ ಬಾಹ್ಯಾಕಾಶಕ್ಕೆ ಒಯ್ಯಲಿದೆ. ಆ ಮೂಲಕ ಬಾಹ್ಯಾಕಾಶದ ಕ್ಲಿಷ್ಟಕರ ಸನ್ನಿವೇಶದಲ್ಲಿ ಅವುಗಳ ಕಾರ್ಯಾಚರಣೆಯನ್ನು ಪರೀಕ್ಷಿಸಲಿದೆ. ವೆಲಾಕ್ಸ್-ಎಎಂ ಸಂಗ್ರಹಿಸುವ ಮಾಹಿತಿಗಳು ಮುಂದಿನ ಬಾಹ್ಯಾಕಾಶ ಯೋಜನೆಗಳಲ್ಲಿ ಎಎಂ ನಿರ್ಮಿತ ಬಿಡಿಭಾಗಗಳ ವಿನ್ಯಾಸವನ್ನು ಅಭಿವೃದ್ಧಿ ಪಡಿಸಲು ನೆರವಾಗಲಿವೆ.


2. ಆರ್ಕೇಡ್ (ARCADE) ಎನ್ನುವುದು 27 - ಯುನಿಟ್ (ಯು), 24 ಕೆಜಿ ತೂಕದ ಕ್ಯೂಬ್ ಉಪಗ್ರಹವಾಗಿದೆ. ಇದನ್ನು ಸಿಂಗಾಪುರದ ನಾನ್‌ಯಾಂಗ್ ಟೆಕ್ನಾಲಜಿಕಲ್ ಯುನಿವರ್ಸಿಟಿ (ಎನ್‌ಟಿಯು) ಮತ್ತು ಇಂಟರ್‌ನ್ಯಾಷನಲ್‌ ಸ್ಯಾಟಲೈಟ್ ಪ್ರೋಗ್ರಾಮ್ ಇನ್ ರಿಸರ್ಚ್ ಆ್ಯಂಡ್ ಟೆಕ್ನಾಲಜಿ (ಇನ್‌ಸ್ಪೈರ್) ಕನ್ಸಾರ್ಷಿಯಂ ಜಂಟಿಯಾಗಿ ಅಭಿವೃದ್ಧಿಪಡಿಸಿವೆ.


ಕ್ಯೂಬ್ ಸ್ಯಾಟ್ ಎನ್ನುವುದು ಒಂದು ಮಾದರಿಯ ಸಣ್ಣ ಉಪಗ್ರಹವಾಗಿದ್ದು, ಗಾತ್ರದಲ್ಲಿ 10 ಸೆಂಟಿಮೀಟರ್ × 10 ಸೆಂಟಿಮೀಟರ್ × 10 ಸೆಂಟಿಮೀಟರ್ ಆಗಿದೆ. ಇದರ 27 - ಯು ಎಂದರೆ, ಆರ್ಕೇಡ್ ಎನ್ನುವ ಕ್ಯೂಬ್ ಸ್ಯಾಟ್ 27 ವೈಯಕ್ತಿಕ ಘನಗಳನ್ನು ಹೊಂದಿದ್ದು, ಅವುಗಳಲ್ಲಿ ಪ್ರತಿಯೊಂದು ಘನವೂ 10 ಸೆಂಟಿಮೀಟರ್ × 10 ಸೆಂಟಿಮೀಟರ್ × 10 ಸೆಂಟಿಮೀಟರ್ ಗಾತ್ರ ಹೊಂದಿದೆ. ಇದು ಆರ್ಕೇಡನ್ನು ಒಂದು ದೊಡ್ಡ ಉಪಗ್ರಹವಾಗಿಸಿ, ವಿವಿಧ ರೀತಿಯ ವೈಜ್ಞಾನಿಕ ಉಪಕರಣಗಳು ಮತ್ತು ಪೇಲೋಡ್‌ಗಳನ್ನು ಒಯ್ಯಲು ಅನುಕೂಲ ಕಲ್ಪಿಸುತ್ತದೆ.


ಆರ್ಕೇಡ್ ಅಯೋಡಿನ್ ಆಧಾರಿತ ಪ್ರೊಪಲ್ಷನ್ ವ್ಯವಸ್ಥೆಯ ಸಹಾಯದಿಂದ ಲೋ ಅರ್ತ್ ಆರ್ಬಿಟ್‌ನಲ್ಲಿ (ಎಲ್ಇಒ) ತನ್ನ ಪಥವನ್ನು ನಿಯಂತ್ರಿಸುತ್ತದೆ. ಈ ಪ್ರೊಪಲ್ಷನ್ ವ್ಯವಸ್ಥೆ ಒಂದು ಹಾಲ್ - ಇಫೆಕ್ಟ್ ಥ್ರಸ್ಟರ್ ಆಧಾರಿತವಾಗಿದ್ದು, ಇದು ಒಂದು ಇಲೆಕ್ಟ್ರಿಕ್ ಪ್ರೊಪಲ್ಷನ್ ಮಾದರಿಯಾಗಿದೆ.


ಅಯೋಡಿನ್ ಬೇಸ್ಡ್ ಸಾಲಿಡ್ ಪ್ರೊಪೆಲೆಂಟ್ ಪ್ರೊಪಲ್ಷನ್ ಮಾಡ್ಯುಲ್: ಇದು ಆರ್ಕೇಡ್ ಉಪಗ್ರಹ ಬಳಸುವ ಪ್ರೊಪಲ್ಷನ್ ಮಾದರಿಯನ್ನು ಸೂಚಿಸುತ್ತದೆ. ಇಲ್ಲಿ ಅಯೋಡಿನ್ ಮತ್ತು ಇತರ ಸಂಯುಕ್ತದ ಮಿಶ್ರಣವನ್ನು ಘನ ಇಂಧನವಾಗಿ ಬಳಸಿಕೊಂಡು, ಅದನ್ನು ದಹಿಸುವ ಮೂಲಕ ಶಕ್ತಿ ಬಿಡುಗಡೆ ಮಾಡಲಾಗುತ್ತದೆ.


ಬೇಸ್ಡ್ ಆನ್ ಹಾಲ್ ಇಫೆಕ್ಟ್ ಥ್ರಸ್ಟರ್: ಅಂದರೆ, ಥ್ರಸ್ಟ್ ಅನ್ನು ಉತ್ಪಾದಿಸುವ ಸಲುವಾಗಿ ಹಾಲ್ ಇಫೆಕ್ಟ್ ಥ್ರಸ್ಟರ್ ಅನ್ನು ಬಳಸುವ ಪ್ರೊಪಲ್ಷನ್ ವ್ಯವಸ್ಥೆ. ಹಾಲ್ ಇಫೆಕ್ಟ್ ಥ್ರಸ್ಟರ್ ಎನ್ನುವುದು ಥ್ರಸ್ಟ್ ಉತ್ಪಾದಿಸಲು ವಿದ್ಯುತ್ ಕ್ಷೇತ್ರವನ್ನು ಬಳಸುತ್ತದೆ.


3. ಸಿಂಗಾಪುರದ ನಾನ್‌ಯಾಂಗ್ ಟೆಕ್ನಾಲಜಿಕಲ್ ಯುನಿವರ್ಸಿಟಿಯ ವಿದ್ಯಾರ್ಥಿಗಳ ತಂಡ ಸ್ಕೂಬ್-2 ಎಂಬ 4 ಕೆಜಿ ತೂಕವುಳ್ಳ, 3ಯು ಕ್ಯೂಬ್ ಉಪಗ್ರಹವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಉಪಗ್ರಹ ಒಂದು ಬೂಟಿನ ಪೆಟ್ಟಿಗೆಯ ಗಾತ್ರದಲ್ಲಿದ್ದು, ಕಕ್ಷೆಯಲ್ಲಿ ಆರು ತಿಂಗಳ ಕಾಲ ಕಾರ್ಯಾಚರಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಸ್ಕೂಬ್-2 ಮೂರು ಅಕ್ಷಗಳ ರಿಯಾಕ್ಷನ್ ವೀಲ್ ಅಸೆಂಬ್ಲಿಯನ್ನು ಬಳಸಿ ಬಾಹ್ಯಾಕಾಶದಲ್ಲಿ ತನ್ನ ಎತ್ತರ, ಚಲನೆಯನ್ನು ನಿಯಂತ್ರಿಸುತ್ತದೆ.


4. ನಲ್ಲಾನ್ (NuLloN) ಎನ್ನುವುದು ನುಸ್ಪೇಸ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ 3 ಕೆಜಿ ತೂಕದ 3ಯು ಕ್ಯೂಬ್ ಉಪಗ್ರಹವಾಗಿದೆ. ಇದೂ ಸಹ ಬೂಟಿನ ಪೆಟ್ಟಿಗೆಯ ಗಾತ್ರದಲ್ಲಿದ್ದು, ನಿರಂತರವಾಗಿ ಲೋರವಾನ್ (LoRaWAN) ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್) ಸೇವೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಲೋರವಾನ್ ಎನ್ನುವುದು ಲೋ ಪವರ್, ವೈಡ್ ಏರಿಯಾ ನೆಟ್‌ವರ್ಕ್ (ಎಲ್‌ಪಿಡಬ್ಲ್ಯುಎಎನ್) ತಂತ್ರಜ್ಞಾನವಾಗಿದ್ದು, ಐಒಟಿ ಉಪಕರಣಗಳಿಗೆ ಸಂಪರ್ಕ ಒದಗಿಸಲು ಬಳಕೆಯಾಗುತ್ತದೆ. ಸಮಭಾಜಕ ಪ್ರದೇಶದಲ್ಲಿ ಐಒಟಿ ಉಪಕರಣಗಳಿಗೆ ಲೋರವಾನ್ ಸೇವೆ ಒದಗಿಸುವ ಉಪಗ್ರಹ ಪುಂಜದಲ್ಲಿ ನಲ್ಲಾನ್ ಮೊದಲ ಉಪಗ್ರಹವಾಗಿದೆ.


ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ): ಅಂದರೆ, ಮಾಹಿತಿಗಳನ್ನು ಸ್ವೀಕರಿಸಲು ಮತ್ತು ರವಾನಿಸಲು ಸೆನ್ಸರ್‌ಗಳು, ಸಾಫ್ಟ್‌ವೇರ್ ಮತ್ತು ನೆಟ್‌ವರ್ಕ್ ಸಂಪರ್ಕ ಹೊಂದಿರುವ ಭೌತಿಕ ಉಪಕರಣಗಳಾಗಿವೆ. ಉದಾಹರಣೆಗೆ, 1. ಸಂಪರ್ಕ ಹೊಂದಿರುವ ಕಾರುಗಳ ಅಪಘಾತದ ಸೂಚನೆ ಲಭಿಸಿದೃ ಸ್ವಯಂಚಾಲಿತವಾಗಿ ಬ್ರೇಕ್ ಬಳಸಿ ಅಪಘಾತವನ್ನು ತಪ್ಪಿಸುತ್ತವೆ. 2. ನಮ್ಮ ದೈಹಿಕ ಚಟುವಟಿಕೆ ಮತ್ತು ಆರೋಗ್ಯ ಮಾಹಿತಿಗಳನ್ನು ತಿಳಿಯುವ ಸ್ಮಾರ್ಟ್ ಉಪಕರಣಗಳು.


5. ಗಲಾಸ್ಸಿಯಾ-2 ಎನ್ನುವುದು 3.5 ಕೆಜಿ ತೂಕವುಳ್ಳ 3ಯು ನ್ಯಾನೋ ಉಪಗ್ರಹವಾಗಿದ್ದು, ಇದನ್ನು ನ್ಯಾಷನಲ್ ಯುನಿವರ್ಸಿಟಿ ಆಫ್ ಸಿಂಗಾಪುರದ (ಎನ್‌ಯುಎಸ್) ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ. ಇದೂ ಸಹ ಸಣ್ಣ ಪೆಟ್ಟಿಗೆಯ ಗಾತ್ರದಲ್ಲಿದ್ದು, ಟೆಲಿಒಎಸ್-1 ಉಪಗ್ರಹದೊಡನೆ ಇಂಟರ್-ಸ್ಯಾಟಲೈಟ್ ಲಿಂಕ್ (ಐಎಸ್ಎಲ್) ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಗಲಾಸ್ಸಿಯಾ-2 ಉಪಗ್ರಹ ಬಾಹ್ಯಾಕಾಶ ಅಪ್ಲಿಕೇಶನ್‌ಗಳಿಗೆ ಕಮರ್ಷಿಯಲ್ ಆಫ್ ದ ಶೆಲ್ಫ್ (ಸಿಒಟಿಎಸ್) ಬಹು ಉದ್ದೇಶಗಳ ಉಪಗ್ರಹ ಚಿತ್ರಣವನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ.


ಟೆಲಿಒಎಸ್-1 ಒಂದು ವಾಣಿಜ್ಯಿಕ ಭೂ ವೀಕ್ಷಣಾ ಉಪಗ್ರಹವಾಗಿದ್ದು, ಇದನ್ನು ಸಿಂಗಾಪುರದ ಎಸ್‌ಟಿ ಇಲೆಕ್ಟ್ರಾನಿಕ್ಸ್ (ಎಸ್‌ಟಿಇಇ) ನಿರ್ಮಿಸಿದೆ. ಇದನ್ನು ಡಿಸೆಂಬರ್ 16, 2015ರಂದು ಉಡಾವಣೆಗೊಳಿಸಲಾಯಿತು. ಈ ಉಡಾವಣೆಯನ್ನು ಪಿಎಸ್ಎಲ್‌ವಿ-ಸಿ29 ರಾಕೆಟ್ ಮೂಲಕ, ಭಾರತದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನೆರವೇರಿಸಲಾಗಿತ್ತು.


ಕಮರ್ಷಿಯಲ್ ಆಫ್ ದ ಶೆಲ್ಫ್ (ಸಿಒಟಿಎಸ್) ಮಲ್ಟಿಸ್ಪೆಕ್ಟ್ರಲ್ ಇಮೇಜರಿ ಫಾರ್ ಸ್ಪೇಸ್ ಅಪ್ಲಿಕೇಶನ್ ಎಂದರೆ, ಈ ಉಪಗ್ರಹ ಛಾಯಾಚಿತ್ರಗಳನ್ನು ಭೂಮಿಯ ಮೇಲ್ಮೈಯನ್ನು ಅಧ್ಯಯನ ನಡೆಸಲು ಮತ್ತು ಇತರ ಉಪಗ್ರಹಗಳ ಬದಲಾವಣೆಗಳನ್ನು ಗಮನಿಸಿ, ಖರ್ಚು ಕಡಿಮೆಗೊಳಿಸಲು ಬಳಸುವುದಾಗಿದೆ. ಈ ಚಿತ್ರಗಳನ್ನು ವಿಪತ್ತು ನಿರ್ವಹಣೆ ಮತ್ತು ಪರಿಸರ ನಿರ್ವಹಣೆಯಂತಹ ಉದ್ದೇಶಗಳಿಗೂ ಬಳಸಿಕೊಳ್ಳಬಹುದು.


6. ಸಿಂಗಾಪುರ ಮೂಲದ ಅಲೀನಾ (ALIENA) ಜಾಗತಿಕ ಸಹಯೋಗದೊಂದಿಗೆ ಒಆರ್‌ಬಿ-12 ಸ್ಟ್ರೈಡರ್ ಉಪಗ್ರಹವನ್ನು ಅಭಿವೃದ್ಧಿ ಪಡಿಸಿದೆ.


ಇದನ್ನೂ ಓದಿ: LAC ಮೇಲೆ ಚೀನಾ ದರ್ಪ: ತಕ್ಕ ಪ್ರತ್ಯುತ್ತರ ನೀಡಲು ಈ ವಿಶೇಷ 'ಯೋಜನೆ' ರೂಪಿಸಿದ ಭಾರತೀಯ ಸೇನೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.