ನವದೆಹಲಿ:  ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ಇಂದು ಆಂಧ್ರಪ್ರದೇಶದ ತಮ್ಮ ಹಳೆಯ ಸ್ನೇಹಿತ  ಮಾಜಿ ಕೇಂದ್ರ ಸಚಿವ ಎಸ್ ಜೈಪಾಲ್ ರೆಡ್ಡಿ ಅವರನ್ನು ನೆನೆದು ಕಣ್ಣೀರಿಟ್ಟರು. ರಾಜ್ಯಸಭೆಯಲ್ಲಿ ಶ್ರದ್ದಾಂಜಲಿ ಸಲ್ಲಿಸುವ ವೇಳೆ ಅವರು ಭಾವನಾತ್ಮಕ ಕ್ಷಣಕ್ಕೆ ಜಾರಿದರು.


COMMERCIAL BREAK
SCROLL TO CONTINUE READING

ಹಿರಿಯ ಕಾಂಗ್ರೆಸ್ ಮುಖಂಡ ಜೈಪಾಲ್ ರೆಡ್ಡಿ ಭಾನುವಾರ ಮುಂಜಾನೆ ಹೈದರಾಬಾದ್ ಆಸ್ಪತ್ರೆಯಲ್ಲಿ ನಿಧನರಾದರು. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರಿಗೆ 77 ವರ್ಷ ವಯಸ್ಸಾಗಿತ್ತು.


ಜೈಪಾಲ್ ರೆಡ್ಡಿಯವರನ್ನು ಸ್ಮರಿಸಿ ಮಾತನಾಡಿದ ಅವರು ಆವರೊಬ್ಬ ಅತ್ಯುತ್ತಮ ವಾಗ್ಮಿ ಮತ್ತು ಸಮರ್ಥ ಆಡಳಿತಗಾರ ಎಂದರು. ನಾಯ್ಡು ಅವರು 1970 ರ ದಶಕದಲ್ಲಿ ಆಂಧ್ರಪ್ರದೇಶದ ವಿಧಾನಸಭೆಯಲ್ಲಿ ರೆಡ್ಡಿ ಅವರೊಂದಿಗೆ ಎರಡು ಅವಧಿಗೆ ಕೆಲಸ ಮಾಡಿದ್ದಾರೆ ಎಂದು ಹೇಳಿ ಆಗ ಅವರು ಬೆಂಚ್ ಹಂಚಿಕೊಂಡ ನೆನಪುಗಳನ್ನು ಸ್ಮರಿಸಿ ಕಣ್ಣಿರಿಟ್ಟರು. ಸದನ ಆರಂಭವಾಗುವ ಮುನ್ನ ಉಭಯ ನಾಯಕರು ಬೆಳಗಿನ ಉಪಾಹಾರದ ವೇಳೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು ಎಂದು ನಾಯ್ಡು ಹೇಳಿದರು.


"ನಾವಿಬ್ಬರೂ ಒಂದೇ ಬೆಂಚ್ ಮೇಲೆ ಕುಳಿತುಕೊಳ್ಳುತ್ತಿದ್ದೆವು, ಜನರ ಸಮಸ್ಯೆಗಳನ್ನು ನಾವು ನಮ್ಮದೇ ಆದ ರೀತಿಯಲ್ಲಿ ವಾದಿಸುತ್ತಿದ್ದೆವು" ಎಂದು ಉಪರಾಷ್ಟ್ರಪತಿ ನಾಯ್ಡು ಅವರು ರೆಡ್ಡಿ ಅವರ ನಾಲ್ಕು ದಶಕಗಳ ಒಡನಾಟವನ್ನು ಸ್ಮರಿಸಿದರು. "ಆ ದಿನಗಳಲ್ಲಿ, ವಿಧಾನಸಭೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗುತ್ತಿತ್ತು. ಬೆಳಗಿನ ಉಪಾಹಾರದ ಬಗ್ಗೆ ಚರ್ಚಿಸಲು ನಾವಿಬ್ಬರೂ ಬೆಳಿಗ್ಗೆ 7 ಗಂಟೆಗೆ ಭೇಟಿಯಾಗುತ್ತಿದ್ದೆವು. ಜ್ಞಾನದ ಪ್ರಮಾಣ, ಭಾಷೆಗಳ ಮೇಲೆ ತಿಳುವಳಿಕೆಯ ಆಳ ಮತ್ತು ಪಾಂಡಿತ್ಯದಲ್ಲಿ ಅವರು ನಿಜವಾಗಿಯೂ ಅದ್ಬುತ ವ್ಯಕ್ತಿಯಾಗಿದ್ದರು" ಎಂದು ಹೇಳಿದರು.


"ಅವರು ನನ್ನ ಸ್ನೇಹಿತ, ಹಿರಿಯರು ಮತ್ತು ಅವರು ನನಗೆ ಮಾರ್ಗದರ್ಶನ ನೀಡುತ್ತಿದ್ದರು. ನಾನು ಅವರಿಗಿಂತ ಆರು ವರ್ಷ ಚಿಕ್ಕವನು. ಜೈಪಾಲ್ ರೆಡ್ಡಿ ಅವರ ನಿಧನಕ್ಕೆ ನಾವು ತೀವ್ರವಾಗಿ ಶೋಕ ವ್ಯಕ್ತಪಡಿಸುತ್ತೇವೆ" ಎಂದು ವಿಷಾಧ ವ್ಯಕ್ತಪಡಿಸಿದರು.


ಜೈಪಾಲ್ ರೆಡ್ಡಿ ಲೋಕಸಭೆಯಲ್ಲಿ ಐದು ಅವಧಿಗೆ ಮತ್ತು ರಾಜ್ಯಸಭೆಯಲ್ಲಿ ಎರಡು ಬಾರಿ ಸೇವೆ ಸಲ್ಲಿಸಿದರು. ರೆಡ್ಡಿ ಅವರ ಸ್ಮರಣೆಗೆ ಗೌರವ ಸೂಚಕವಾಗಿ ರಾಜ್ಯಸಭಾ ಸದಸ್ಯರು ಒಂದು ನಿಮಿಷದ ಮೌನಾಚರಣೆ ಸಲ್ಲಿಸಲಾಯಿತು. ಅವರು ಕುಳಿತಾಗ ಕಣ್ಣೀರು ಒರೆಸಿಕೊಂಡ ನಾಯ್ಡು ಅವರು ರಾಜ್ಯಸಭಾ ಸದಸ್ಯರಿಗೆ ಕ್ಷಮೆಯಾಚಿಸಿದರು. "ಕ್ಷಮಿಸಿ, 40 ವರ್ಷಗಳ ವೈಯಕ್ತಿಕ ಒಡನಾಟದಿಂದಾಗಿ ನನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದರು.