ಕಾನ್ಪುರ: ಲೋಕಸಭೆ ಚುನಾವಣೆಯಲ್ಲಿ ಹಿರಿಯ ಬಿಜೆಪಿ ನಾಯಕರ ಟಿಕೆಟ್ ಕಡಿತದ ನಂತರ ಮೊದಲ ಬಾರಿಗೆ ವರಿಷ್ಠ ನಾಯಕರೊಬ್ಬರು ಬಹಿರಂಗವಾಗಿ ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ. ಕಾನ್ಪುರದ ಮತದಾರರಿಗೆ ಪತ್ರವೊಂದನ್ನು ನೀಡುವ ಮೂಲಕ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಶಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗೆಗಿನ ವಿವಾದವನ್ನು ಅನಾವರಣಗೊಳಿಸಿದರು. 


COMMERCIAL BREAK
SCROLL TO CONTINUE READING

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ)  ರಾಮ್ಲಾಲ್ ಸಲಹೆ ನೀಡಿದ್ದಾರೆ ಎಂದು ಮುರಳಿ ಮನೋಹರ್ ಜೋಶಿ ಪತ್ರವೊಂದನ್ನು ಬರೆದಿದ್ದಾರೆ. ರಾಮ್ಲಾಲ್ ಅವರ ಸಲಹೆಯ ಆಧಾರದ ಮೇಲೆ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಬರೆದಿದ್ದಾರೆ.


ಮುರಳಿ ಮನೋಹರ್ ಜೋಶಿ ಅವರ ದೆಹಲಿ ಕಛೇರಿ ಹೊರಡಿಸಿದ ಈ ಪತ್ರವನ್ನು ಕಾನ್ಪುರ್ ಮತದಾರರಿಗಾಗಿ ಬರೆಯಲಾಗಿದೆ. ಈ ಬಾರಿ ನನ್ನ ಹೆಸರು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿಲ್ಲ. ಕಾನ್ಪುರ್ ಮಾತ್ರವಲ್ಲದೆ, ತಾವು ಎಲ್ಲಿಂದಲಾದರೂ ಸ್ಪರ್ಧಿಸಬಾರದು ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ರಾಮ್ಲಾಲ್ ಹೇಳಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಆದರೆ ಈ ಪತ್ರದಲ್ಲಿ ಮುರಳಿ ಮನೋಹರ್ ಜೋಶಿ ಅವರ ಸಹಿ ಇಲ್ಲ.



2014 ರಲ್ಲಿ ಕಾನ್ಪುರದಿಂದ ಚುನಾವಣೆ ಗೆದ್ದಿದ್ದ ಜೋಶಿ:
2014 ರ ಲೋಕಸಭಾ ಚುನಾವಣೆಯಲ್ಲಿ ಕಾನ್ಪುರ್ ಕ್ಷೇತ್ರದಿಂದ ಮುರಳಿ ಮನೋಹರ್ ಜೋಶಿ ವಿಜಯ ಸಾಧಿಸಿದ್ದರು. ಜೋಶಿ ತಮ್ಮ ಎದುರಾಳಿಯನ್ನು 2.22 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಮಣಿಸಿದ್ದರು. 2014 ರ ಅಂಕಿ ಅಂಶಗಳ ಪ್ರಕಾರ, ಜೋಶಿ ಅವರು 4.74 ಲಕ್ಷ ಮತಗಳನ್ನು ಪಡೆದಿದ್ದಾರೆ. 


ಸ್ಟಾರ್ ಪ್ರಚಾರಕರ ಪಟ್ಟಿಯಲ್ಲೂ ಇಲ್ಲ ಜೋಶಿ ಹೆಸರು: 
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಉದ್ದಗಲಕ್ಕೂ ಪಕ್ಷದ ಪರ ಪ್ರಚಾರ ಮಾಡಲು ಭಾರತೀಯ ಜನತಾ ಪಕ್ಷ (ಬಿಜೆಪಿ) ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಈ ಪಟ್ಟಿಯಲ್ಲೂ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಅವರ ಹೆಸರುಗಳನ್ನು ಕೈಬಿಡಲಾಗಿದೆ.