Video: ಒಡಿಶಾದ ಪುರಿಯಲ್ಲಿ ಫಾನಿ ಚಂಡಮಾರುತದ ಅಬ್ಬರ; 200 ಕಿ.ಮೀ ವೇಗದಲ್ಲಿ ಬೀಸುತ್ತಿದೆ ಗಾಳಿ
ಒಡಿಶಾದಲ್ಲಿ ಸುಮಾರು 11 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿರುವ ರಾಜ್ಯ ಸರ್ಕಾರ ಆಶ್ರಯ ಕೇಂದ್ರಗಳಲ್ಲಿ ಆಶ್ರಯ ನೀಡಿದೆ.
ನವದೆಹಲಿ: ಶುಕ್ರವಾರ ಬೆಳಿಗ್ಗೆ ಒಡಿಶಾದ ಕರಾವಳಿ ತೀರದಲ್ಲಿ ಸೈಕ್ಲೋನ್ ಫಾನಿ ಅಪ್ಪಳಿಸಿದ್ದು, ಪುರಿ ಸೇರಿದಂತೆ ಇತರ ಕರಾವಳಿ ಪ್ರದೇಶಗಳಲ್ಲಿ ಪ್ರತಿ ಗಂಟೆಗೆ ಸುಮಾರು 200 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಅಲ್ಲದೆ, ಭಾರೀ ಮಳೆ ಸಹ ಬೀಳುತ್ತಿದ್ದು, ಪುರಿ ಮತ್ತು ಭುವನೇಶ್ವರದ ಅನೇಕ ಸ್ಥಳಗಳಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಒಡಿಶಾದಲ್ಲಿ ಸುಮಾರು 11 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿರುವ ರಾಜ್ಯ ಸರ್ಕಾರ ಆಶ್ರಯ ಕೇಂದ್ರಗಳಲ್ಲಿ ಆಶ್ರಯ ನೀಡಿದೆ. ಈಗಾಗಲೇ ರಾಜ್ಯದ 17 ಜಿಲ್ಲೆಗಳಲ್ಲಿ ಫೋನಿ ಚಂಡಮಾರುತದ ಎಚ್ಚರಿಕೆ ನೀಡಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಹೈದರಾಬಾದ್ ನಲ್ಲಿರುವ ಹವಾಮಾನ ಇಲಾಖೆ ಪ್ರಕಾರ ಈಗ ಪುರಿಯಲ್ಲಿ ಪ್ರತಿ ಗಂಟೆಗೆ ಸುಮಾರು 240 ರಿಂದ 245 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಅಲ್ಲದೆ, ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ತೀವ್ರತೆ ಕಡಿಮೆಯಾದ ಬಳಿಕ ಚಂಡಮಾರುತವು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳ ಕಡೆಗೆ ಚಲಿಸಲಿದೆ. ಅಲ್ಲದೆ ರಕ್ಷಣಾ ಕಾರ್ಯಕ್ಕಾಗಿ ವಿಶಾಖಪಟ್ಟಣದಲ್ಲಿ ನೌಕಾಪಡೆಯ 13 ವಿಮಾನಗಳು ಸಿದ್ಧವಾಗಿವೆ.
ಒಡಿಶಾದಲ್ಲಿರುವ ಫೋನಿ ಚಂಡಮಾರುತದ ಪ್ರಭಾವವು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಗೋಚರವಾಗುತ್ತಿದ್ದು, ವಿಶಾಖಪಟ್ಟಣಂನಲ್ಲಿ ಸಮುದ್ರತೀರದಲ್ಲಿ ಭಾರಿ ವೇಗವಾಗಿ ಗಾಳಿ ಬೀಸುತ್ತಿದೆ. ಸಮುದ್ರದ ಅಲೆಗಳ ಎತ್ತರವೂ ಸಹ ಹೆಚ್ಚಾಗುತ್ತಿದೆ. Fani ಚಂಡಮಾರುತದ ಬೀಸುತ್ತಿರುವ ಬೆನ್ನಲ್ಲೇ ಭಾರತೀಯ ಕರಾವಳಿ ಭದ್ರತಾಪಡೆ ಪರಿಸ್ಥಿತಿಯನ್ನು ನಿಭಾಯಿಸಲು 34 ರಕ್ಷಣಾ ತಂಡಗಳನ್ನು ವೈಜಾಗ್, ಚೆನ್ನೈ, ಪ್ಯಾರಡಿಪ್, ಗೋಪಾಲ್ಪುರ, ಹಲ್ದಿಯಾ, ಫ್ರೇಜರ್ಗಂಜ್ ಮತ್ತು ಕೊಲ್ಕತ್ತಾದಲ್ಲಿ ನಿಯೋಜಿಸಲಾಗಿದೆ. ಏತನ್ಮಧ್ಯೆ ಕೋಸ್ಟ್ ಗಾರ್ಡ್ನ ನಾಲ್ಕು ದೋಣಿಗಳನ್ನು ವೈಜಾಗ್ ಮತ್ತು ಚೆನ್ನೈನಲ್ಲಿ ನಿಯೋಜಿಸಲಾಗಿದೆ.