Video: ರಾಜಸ್ಥಾನದಲ್ಲಿ ರಸ್ತೆಬದಿಯಲ್ಲಿ ಇವಿಎಂ ಪತ್ತೆ; ಅಧಿಕಾರಿಗಳ ಅಮಾನತು
ಶುಕ್ರವಾರ ರಾತ್ರಿ ಕೃಷ್ಣಗಂಜ್ ವಿಧಾನಸಭೆ ವ್ಯಾಪ್ತಿಯಲ್ಲಿ ಮತಯಂತ್ರ (ಸೀರಿಯಲ್ ನಂ. BBUAD41390) ರಸ್ತೆ ಬದಿ ಪತ್ತೆಯಾಗಿತ್ತು.
ಜೈಪುರ: ರಾಜಸ್ಥಾನ ವಿಧಾನಸಭೆಗೆ ಶುಕ್ರವಾರವಷ್ಟೇ ಚುನಾವಣೆ ನಡೆದ ಬೆನ್ನಲ್ಲೇ ಬರಾನ್ ಜಿಲ್ಲೆಯ ಶಹಾಬಾದ್ ಪ್ರದೇಶದ ಮುಖ್ಯರಸ್ತೆ ಬದಿಯಲ್ಲಿ ಇವಿಯಂ ಬಿದ್ದಿರುವುದು ಪತ್ತೆಯಾಗಿದೆ.
ಬರಾನ್ ಜಿಲ್ಲೆಯ ಮುಗವಾಲಿ ಗ್ರಾಮದ ಮೂಲಕ ಹಾದು ಹೋಗಿರುವ ಹೈವೇ 26ರಲ್ಲಿ ಸೀಲ್ ಮಾಡಲಾದ ವಿದ್ಯುನ್ಮಾನ ಮತಯಂತ್ರ ಶುಕ್ರವಾರ ರಾತ್ರಿ ಪತ್ತೆಯಾಗಿದೆ. ಈ ಸಂಬಂಧ ಚುನಾವಣಾ ಆಯೋಗ ಇಬ್ಬರು ಚುನಾವಣಾ ಸಿಬ್ಬಂದಿಯನ್ನು ಅಮಾನತು ಮಾಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಾಜಸ್ಥಾನ 199 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಡಿಸೆಂಬರ್ 8ರಂದು ನಡೆದ ಚುನಾವಣೆಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಶೇ.72.7ರಷ್ಟು ಮತದಾನ ನಡೆದಿತ್ತು. ಆ ನಂತರ ಮತಯಂತ್ರಗಳನ್ನು ಸ್ಟ್ರಾಂಗ್ರೂಂಗೆ ತಲುಪಿಸಲಾಗಿತ್ತು. ಆದರೆ, ಶುಕ್ರವಾರ ರಾತ್ರಿ ಕೃಷ್ಣಗಂಜ್ ವಿಧಾನಸಭೆ ವ್ಯಾಪ್ತಿಯಲ್ಲಿ ಮತಯಂತ್ರ (ಸೀರಿಯಲ್ ನಂ. BBUAD41390) ರಸ್ತೆ ಬದಿ ಪತ್ತೆಯಾಗಿತ್ತು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಚುನಾವಣಾ ಆಯೋಗ ಅಬ್ದುಲ್ ರಫೀಕ್ ಮತ್ತು ನವಾಲ್ ಸಿಂಗ್ ಪಟ್ವಾರಿ ಎಂಬ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಿದೆ.