ಪ್ರಯಾಗ್​ರಾಜ್​​: ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಭಾನುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರಲ್ಲದೆ, ಪೌರ ಕಾರ್ಮಿಕರ ಪಾದ ತೊಳೆದು ಪೂಜೆ ನೆರವೇರಿಸಿದರು. 


COMMERCIAL BREAK
SCROLL TO CONTINUE READING

ದೇಶದ ಪ್ರಧಾನಿಯಾದಾಗಿನಿಂದಲೂ ಸ್ವಚ್ಚತೆಗೆ ಆದ್ಯತೆ ನೀಡುತ್ತಾ ಬಂದಿರುವ ನರೇಂದ್ರ ಮೋದಿ ಅವರು, ಇಂದು ಕುಂಭಮೇಳದಲ್ಲಿ ಆಯೋಜಿಸಿದ್ದ ಸ್ವಚ್ಛ ಕುಂಭ್​​ -ಸ್ವಚ್ಛ ಆಭಾರ್​​ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ಪಾದ ತೊಳೆದು ಪೂಜೆ ಮಾಡಿ ಸನ್ಮಾನಿಸಿದರು. ಈ ಮೂಲಕ ಪೌರಕಾರ್ಮಿಕರ ಪಾದ ತೊಳೆದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾದರು. ಇವರಲ್ಲಿ ಮಹಿಳಾ ಪೌರ ಕಾರ್ಮಿಕರೂ ಸೇರಿದಂತೆ ಒಟ್ಟು ಐವರ ಪಾದ ತೊಳೆದ ಮೋದಿ, ಅವರಿಗೆ ಶಾಲು ಹೊದಿಸಿ ನಮಸ್ಕಾರ ಮಾಡಿದರು. 



ಬಳಿಕ ಮಾತನಾಡಿದ ಮೋದಿ, ಕುಂಭಮೇಳದಲ್ಲಿ ಸ್ವಚ್ಚತೆಯನ್ನು ಕಾಪಾಡಿದ ಪೌರಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಿದರಲ್ಲದೆ, ಹಿಂದೆದೂ ಗಂಗಾ ನದಿ ಇಷ್ಟೊಂದು ಸ್ವಚ್ಛವಾಗಿದ್ದನ್ನು ತಾವು ಕಂಡೇ ಇಲ್ಲ. ಇದೆಲ್ಲಾ 'ನಮಾಮಿ ಗಂಗಾ ಯೋಜನೆ'ಯಿಂದ ಸಾಧ್ಯವಾಗಿದೆ ಎಂದರು.


"ಪೌರಕಾರ್ಮಿಕರ ಪಾದ ತೊಳೆದು, ನಮಸ್ಕರಿಸಿ ಆಶೀರ್ವಾದ ಪಡೆದ ಸಂದರ್ಭ ನಿಜಕ್ಕೂ ಭಾವನಾತ್ಮಕವಾದುದು. ಅವರ ಏಳಿಗೆಗಾಗಿ ಮುಂದೆಯೂ ನಾನು ಶ್ರಮಿಸುತ್ತೇನೆ" ಎಂದ ಮೋದಿ, ತಮಗೆ ಇತ್ತೀಚೆಗೆ ದೊರೆತ ಸಿಯೋಲ್ ಶಾಂತಿ ಪ್ರಶಸ್ತಿಯಲ್ಲಿ ದೊರೆತ ಹಣವನ್ನು ನಮಾಮಿ ಗಂಗಾ ಯೋಜನೆಗೆ ಅರ್ಪಿಸಿರುವುದಾಗಿ ಪ್ರಧಾನಿ ಮೋದಿ ತಿಳಿಸಿದರು.