ಬೆಂಗಳೂರು: ಇಂದು ಸಂಜೆ 6 ಗಂಟೆಯೊಳಗೆ ಸ್ಪೀಕರ್ ಕಚೇರಿಗೆ ಆಗಮಿಸಿ ಖುದ್ದಾಗಿ ರಾಜೀನಾಮೆ ಸಲ್ಲಿಸಲು ಸಮ್ಮಿಶ್ರ ಸರ್ಕಾರದ ಅತೃಪ್ತ ಶಾಸಕರಿಗೆ ಸುಪ್ರೀಂ ಕೋರ್ಟ್ ಆದೇಶಿಸಿದ್ದ ಹಿನ್ನೆಲೆಯಲ್ಲಿ ಮುಂಬೈನಿಂದ ಬಂದ ಶಾಸಕರು ಸ್ವಲ್ಪ ತಡವಾಗಿ ಸ್ಪೀಕರ್ ಕಚೇರಿ ತಲುಪಿದ ಕಾರಣ ಬಸ್ ಇಳಿಯುತ್ತಿದ್ದಂತೆ ಓಡಿ ಹೋಗಿ ರಾಜೀನಾಮೆ ಸಲ್ಲಿಸಿದರು.


COMMERCIAL BREAK
SCROLL TO CONTINUE READING

ಗುರುವಾರ ಸಂಜೆ 6 ಗಂಟೆಗೆ ಸ್ಪೀಕರ್ ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವಂತೆ ಸುಪ್ರೀಂ ಆದೇಶ ನೀಡಿದ್ದರಿಂದ ಮುಂಬೈನಿಂದ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಾಸಕರು ಅಲ್ಲಿಂದ ಬಸ್ಸಿನಲ್ಲಿ ವಿಧಾನಸೌಧಕ್ಕೆ ಆಗಮಿಸುವ ವೇಳೆಗೆ ಸಮಯ 6 ಗಂಟೆ ಮೀರಿದ್ದ ಹಿನ್ನೆಲೆಯಲ್ಲಿ ಬಸ್ ಇಳಿಯುತ್ತಿದ್ದಂತೆ ಶಾಸಕ ಬೈರತಿ ಬಸವರಾಜು ಸೇರಿದಂತೆ ಇತರ ಶಾಸಕರು ಸಮಯ ಮೀರಿದ್ದರಿಂದ ಓಡೋಡಿ ಸ್ಪೀಕರ್ ಕಚೇರಿ ತಲುಪಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸಿದರು.



ಇದಕ್ಕೂ ಮುನ್ನ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ವಿಧಾನಸೌಧಕ್ಕೆ ಶಾಸಕರು ಬರುವ ಮಾರ್ಗದಲ್ಲಿ ಜೀರೋ ಟ್ರಾಫಿಕ್ ಜೊತೆಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. 



ಮತ್ತೊಂದೆಡೆ ಶುಕ್ರವಾರದಿಂದ ಆರಂಭವಾಗಲಿರುವ ವಿಧಾನಸಭೆ ಮುಂಗಾರು ಅಧಿವೇಶನದಲ್ಲಿ ಹಣಕಾಸು ಮಸೂದೆ ಮತ್ತು ಇತರ ಮಸೂದೆಗಳನ್ನು ಅಂಗೀಕರಿಸಲು ಎಲ್ಲಾ ಶಾಸಕರು ತಪ್ಪದೇ ಸದನದಲ್ಲಿ ಹಾಜರಿರಬೇಕು ಮತ್ತು ಸರ್ಕಾರದ ಪರವಾಗಿ ಮತ ಚಲಾಯಿಸಬೇಕು. ಒಂದು ವೇಳೆ ಸದನಕ್ಕೆ ಗೈರಾದರೆ ಅಥವಾ ಹಾಜರಿದ್ದು ಸರ್ಕಾರದ ಪರ ಮತ ಚಲಾಯಿಸದೆ ಇದ್ದರೆ ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗುವುದು ಎಂದು ವಿಧಾನಸಭೆ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ವಿಪ್ ಜಾರಿಮಾಡಿದ್ದಾರೆ.


ಈಗ 8 ಅತೃಪ್ತ ಶಾಸಕರು ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿದ್ದು, ಮುಂದಿನ ನಿರ್ಧಾರವನ್ನು ಸ್ಪೀಕರ್ ಕೈಗೊಳ್ಳಲಿದ್ದಾರೆ. ಹಾಗಾಗಿ ಶಾಸಕರ ರಾಜೀನಾಮೆ ಚೆಂಡು ಸ್ಪೀಕರ್ ಅಂಗಳದಲ್ಲಿರುವುದರಿಂದ ಮುಂದೆ ಏನಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ.