VIDEO: ಡಿಕೆಶಿ ಬಂಧನ ಹಿನ್ನೆಲೆ, ಬಟ್ಟೆ ಹರಿದುಕೊಂಡು ಕಣ್ಣೀರಿಟ್ಟ ಬೆಂಬಲಿಗ!
ವೈದ್ಯಕೀಯ ಚಿಕಿತ್ಸೆಗಾಗಿ ಡಿಕೆಶಿ ಅವರನ್ನು ಆಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿ ಆರ್ ಎಂಎಲ್ ಆಸ್ಪತ್ರೆಯ ಹೊರಗೆ ಡಿಕೆಶಿ ಬೆಂಬಲಿಗನೊಬ್ಬ ಬಟ್ಟೆ ಹರಿದುಕೊಂಡು ಕಣ್ಣೀರಿಟ್ಟ ಘಟನೆ ನಡೆದಿದೆ.
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಮಂಗಳವಾರ ರಾತ್ರಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೆಹಲಿಯಲ್ಲಿ ಬಂಧಿಸಿದ್ದು, ಈ ಬಗ್ಗೆ ಡಿಕೆಶಿ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಬಂಧನದ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆಯೇ ದೆಹಲಿಯ ಜಾರಿ ನಿರ್ದೇಶನಾಲಯದ ಕಚೇರಿಯ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಬಳಿಕ ಡಿ.ಕೆ.ಶಿವಕುಮಾರ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಆರ್ಎಂಎಲ್ ಆಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿಯೂ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಆರ್ ಎಂಎಲ್ ಆಸ್ಪತ್ರೆಯ ಹೊರಗೆ ಡಿಕೆಶಿ ಬೆಂಬಲಿಗನೊಬ್ಬ ಬಟ್ಟೆ ಹರಿದುಕೊಂಡು ಕಣ್ಣೀರಿಟ್ಟ ಘಟನೆ ನಡೆದಿದೆ. ಅಲ್ಲದೆ, ಕೂಡಲೇ ಡಿಕೆ ಶಿವಕುಮಾರ್ ಅವರನ್ನು ಬಿಡುಗಡೆ ಮಾಡಬೇಕು ಇಲ್ಲವಾದರೆ ಸಾಯುತ್ತೇನೆ ಎಂಬುದಾಗಿಯೂ ಸಹ ಆತ ಈ ಸಂದರ್ಭದಲ್ಲಿ ಹೇಳುತ್ತಾ ಕಣ್ಣೀರಿಟ್ಟಿದ್ದಾನೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಡಿಕೆಶಿ ಬಂಧನವನ್ನು ಖಂಡಿಸಿ ಕನಕಪುರ ಮತ್ತು ರಾಮನಗರದಲ್ಲಿಯೂ ಮಂಗಳವಾರ ತಡರಾತ್ರಿಯೂ ತೀವ್ರ ಪ್ರತಿಭಟನೆ ಮುಂದುವರೆದಿದ್ದು, ವಾಹನಗಳ ಮೇಲೆ ಕಲ್ಲುತೂರಾಟ ನಡೆಸಲಾಗಿದೆ. ಈಗಾಗಲೇ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಅಲ್ಲದೆ, ಬುಧವಾರ ರಾಜ್ಯಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್ ಕರೆ ನೀಡಿದೆ.