ಲಂಡನ್​: ಭಾರತದ ವಿವಿಧ ಬ್ಯಾಂಕ್​ಗಳಿಂದ 9 ಸಾವಿರ ಕೋಟಿ ರೂ. ಸಾಲ ಪಡೆದು ಮರುಪಾವತಿಸಿದೆ ವಂಚಿಸಿ ಬ್ರಿಟನ್​ ನಲ್ಲಿರುವ ತಮ್ಮನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಬ್ರಿಟನ್​ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ವಾಣಿಜ್ಯೋದ್ಯಮಿ ವಿಜಯ್​ ಮಲ್ಯ ಸಲ್ಲಿಸಿದ್ದ ಮೇಲ್ಮನವಿಯನ್ನು ಬ್ರಿಟನ್​ ಹೈಕೋರ್ಟ್​ ವಜಾಗೊಳಿಸಿದೆ. ಇದರೊಂದಿಗೆ ಭಾರತಕ್ಕೆ ಮಲ್ಯ ಹಸ್ತಾಂತರ ಶೀಘ್ರ ಆಗುವ ಸಾಧ್ಯತೆ ಇದೆ. 


COMMERCIAL BREAK
SCROLL TO CONTINUE READING

ವಿಜಯ್​ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ವೆಸ್ಟ್​ಮಿನ್​ಸ್ಟರ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ನ ಮುಖ್ಯ ಮ್ಯಾಜಿಸ್ಟ್ರೇಟ್​ ಎಮ್ಮಾ ಆರ್ಬುತ್​ನಾಟ್​, ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕು. ಅಲ್ಲಿನ ನ್ಯಾಯಾಲಯದ ವಿಚಾರಣೆಗೆ ಒಳಪಡಬೇಕು ಎಂದು ತೀರ್ಪು ನೀಡಿದ್ದರು. ಅಲ್ಲದೆ, ವೆಸ್ಟ್​ಮಿನ್​ಸ್ಟರ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ನ ತೀರ್ಪನ್ನು ಬ್ರಿಟನ್​ನ ಗೃಹ ಕಾರ್ಯದರ್ಶಿ ಸಜೀದ್​ ಜಾವೀದ್​ ಅನುಮೋದಿಸಿದ್ದರು.


ಆದರೆ, ಈ ತೀರ್ಪಿನ ಕುರಿತು ವಿಜಯ್​ ಮಲ್ಯ ಬ್ರಿಟನ್​ನ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್‌ನಲ್ಲೂ ವಿಜಯ್‌ ಮಲ್ಯಗೆ ಹಿನ್ನಡೆಯಾಗಿದೆ. ವಿಜಯ್‌ ಮಲ್ಯ ಹಸ್ತಾಂತರಕ್ಕೆ ಪ್ರಯತ್ನಿಸುತ್ತಿರುವ ಭಾರತಕ್ಕೆ ಮತ್ತೊಂದು ಯಶಸ್ಸು ದೊರೆತಂತಾಗಿದೆ. ಭಾರತದ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಲಂಡನ್‌ ಕೋರ್ಟ್‌ ಕಳೆದ ಡಿಸೆಂಬರ್‌ನಲ್ಲಿ ತೀರ್ಪು ನೀಡಿ ಹಸ್ತಾಂತರ ಮಾಡಲು ಆದೇಶ ನೀಡಿತ್ತು.