ಮತ್ತೆ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿರುವ ವಿಜಯ್ ರೂಪಾನಿ
ಭೂಪೇಂದ್ರ ಸಿಂಗ್ ಚುದಾಸಾಮಾ, ಕೌಶಿಕ್ ಪಟೇಲ್, ಗಣಪತ್ ವಸವ, ದಿಲೀಪ್ ಥಕೋರೆ, ಬಾಬುಭಾಯ್ ಬೊಖರಿಯಾ ಮತ್ತು ಪ್ರದೀಪ್ ಸಿಂಗ್ ಜಡೇಜಾ ಪ್ರಮಾಣವಚನ ಕೈಗೊಳ್ಳುವ ಸಾಧ್ಯತೆ.
ಅಹ್ಮದಾಬಾದ್: ಗುಜರಾತ್ನಲ್ಲಿ ಇಂದು (ಡಿಸೆಂಬರ್ 26) ಆರನೇ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗುತ್ತಿದೆ. ಕಳೆದ 22 ವರ್ಷಗಳಿಂದ ಬಿಜೆಪಿ ನಿಯಂತ್ರಿತ ಗುಜರಾತ್ ನಲ್ಲಿ ಇಂದು ಮತ್ತೆ ಮುಖ್ಯಮಂತ್ರಿ ವಿಜಯ್ ರುಪಾನಿ ಮತ್ತು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ನೇತೃತ್ವದ ನೂತನ ಸರ್ಕಾರವು ಗಾಂಧಿನಗರದಲ್ಲಿ 11 ಗಂಟೆಗೆ ಭವ್ಯ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಎನ್ಡಿಎ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ 18 ರಾಜ್ಯಗಳ ಪಕ್ಷದ ಹಿರಿಯ ನಾಯಕರು ಸಹ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿಜಯ್ ರುಪಾನಿ ಮತ್ತು ನಿತಿನ್ ಪಟೇಲ್ ಅವರೊಂದಿಗೆ, ಗವರ್ನರ್ ಒ.ಪಿ ಕೊಹ್ಲಿ ಹಲವಾರು ಇತರ ಸಚಿವರುಗಳಿಗೂ ಕೂಡ ಪ್ರತಿಜ್ಞೆ ಬೋಧಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಬಿಜೆಪಿ ಮತ್ತು ಎನ್ಡಿಎ ಮುಖ್ಯಮಂತ್ರಿಗಳು ಶಾಸನ ಸಭೆಯ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಗುಜರಾತ್ ರಾಜ್ಯ ಬಿಜೆಪಿ ಅಧ್ಯಕ್ಷ ಜಿತು ವಘನಿ ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಹಿರಿಯ ಮುಖಂಡರನ್ನು ವಿವಿಧ ಧರ್ಮಗಳ ಸಂತರು ಮತ್ತು ಧಾರ್ಮಿಕ ನಾಯಕರನ್ನು ಆಹ್ವಾನಿಸಲಾಗಿದೆ. ರೂಪಾನಿ ಮತ್ತು ನಿತಿನ್ ಪಟೇಲ್ ಹೊರತುಪಡಿಸಿ, ಆರರಿಂದ ಒಂಬತ್ತು ಕ್ಯಾಬಿನೆಟ್ ಮಂತ್ರಿಗಳು ಮತ್ತು ಸುಮಾರು 15 ಮಂತ್ರಿಗಳ ಪ್ರಮಾಣವಚನ ಕೈಗೊಳ್ಳುವ ಸಾಧ್ಯತೆ ಇದೇ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹಿಂದಿನ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ಹಲವು ಹಿರಿಯ ಸಚಿವರು ಕ್ಯಾಬಿನೆಟ್ಗೆ ಸೇರಿಕೊಳ್ಳಬಹುದು. ಭೂಪೇಂದ್ರ ಸಿಂಗ್ ಚುದಾಸಾಮಾ, ಕೌಶಿಕ್ ಪಟೇಲ್, ಗಣಪತ್ ವಸವ, ದಿಲೀಪ್ ಥಕೋರೆ, ಬಾಬುಭಾಯ್ ಬೊಖಾರಿಯಾ ಮತ್ತು ಪ್ರದೀಪ್ಸಿನ್ ಜಡೇಜಾ ಅವರ ಹೆಸರುಗಳು ಕ್ಯಾಬಿನೆಟ್ಗಾಗಿ ಮುಂಚೂಣಿಯಲ್ಲಿವೆ. ಜೊತೆಗೆ ಕೆಲವು ಹೊಸ ಮುಖಗಳನ್ನು ಸರ್ಕಾರದಲ್ಲಿ ರಾಜ್ಯ ಮಂತ್ರಿಗಳಾಗಿ ಸೇರಿಸಿಕೊಳ್ಳಬಹುದಾದ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಹಿಂದಿನ ಸರ್ಕಾರದಲ್ಲಿದ್ದ ಆರು ಮಂತ್ರಿಗಳು ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಅಸೆಂಬ್ಲಿ ಸ್ಪೀಕರ್ ರಾಮನ್ಲಾಲ್ ವೋರಾ ಸಹ ಚುನಾವಣೆಯಲ್ಲಿ ಸೋತಿದ್ದಾರೆ. ರುಪಾನಿ ಮತ್ತು ಪಟೇಲ್ ಅವರನ್ನು ಡಿಸೆಂಬರ್ 22 ರಂದು ಕೇಂದ್ರ ವೀಕ್ಷಕರಾದ - ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಸರೋಜ್ ಪಾಂಡೇ ಬಿಜೆಪಿ ಶಾಸಕಾಂಗ ಪಕ್ಷದ ಉಪಸ್ಥಿತಿಯಲ್ಲಿ ಕ್ರಮವಾಗಿ ಮುಖ್ಯ ಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 182 ಸದಸ್ಯರುಳ್ಳ ವಿಧಾನ ಸಭಾ ಚುನಾವಣೆಯಲ್ಲಿ 99 ಸ್ಥಾನಗಳ ಒಂದು ಸರಳ ಬಹುಮತವನ್ನು ಗೆದ್ದುಕೊಂಡಿದೆ.