LAC ಬಳಿ ಭಾರತ-ಚೀನಾ ಸೈನಿಕರ ಮಧ್ಯೆ ಘರ್ಷಣೆ, 5 ಚೀನೀ ಸೈನಿಕರ ಸಾವು
ಈ ನಡುವೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ಸೇನೆ ಲಡಾಖ್ ನ ಗಲವಾನ್ ಕಣಿವೆಯಲ್ಲಿ ನಡೆದಿರುವ ಭಾರತ-ಚೀನಾ ಸೈನಿಕರ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ ಓರ್ವ ಭಾರತೀಯ ಸೇನಾ ಅಧಿಕಾರಿ ಸೇರಿದಂತೆ 2 ಜವಾನರು ಹುತಾತ್ಮರಾಗಿದ್ದಾರೆ ಎಂದು ಹೇಳಿದೆ.
ನವದೆಹಲಿ: ಲಡಾಕ್ ಬಳಿ ಇರುವ LAC ಉಲ್ಲಂಘನೆಯ ಕುರಿತು ಭಾರತ ಹಾಗೂ ಚೀನಾ ಸೈನಿಕರ ನಡುವೆ ಹಲವು ದಿನಗಳಿಂದ ಸಂಘರ್ಷ ನಡೆದಿದೆ. ಏತನ್ಮಧ್ಯೆ ಭಾರತೀಯ ಸೇನಾ ಅಧಿಕಾರಿಯೊಬ್ಬರು ಹೇಳಿಕೆಯೊಂದನ್ನು ನೀಡಿದ್ದು, ನಿನ್ನೆ ಸಾಯಂಕಾಲ ಉಭಯ ದೇಶಗಳ ನಡುವೆ ಹಿಂಸಾತ್ಮಕ ಘರ್ಷಣೆ ಸಂಭವಿಸಿದ್ದು, ಈ ಘರ್ಷಣೆಯಲ್ಲಿ ಓರ್ವ ಭಾರತೀಯ ಸೇನಾ ಅಧಿಕಾರಿ ಸೇರಿದಂತೆ 2 ಸೇವಾಜವಾನರು ಹುತಾತ್ಮರಾಗಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಇದೀಗ ಬಂದ ಮಾಹಿತಿ ಪ್ರಕಾರ ಈ ಘರ್ಷಣೆಯಲ್ಲಿ ಚೀನಾದ ಐವರು ಜವಾನರೂ ಕೂಡ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಸಂಪೂರ್ಣ ಪ್ರಕರಣದ ಕುರಿತು ಮಾಹಿತಿ ನೀಡಿರುವ ಚೀನಾದ ವಿದೆಶಾಂಗಲ್ ಇಲಾಖೆ ಭಾರತೀಯ ಸೇನಾ ಜವಾನರು LAC ಉಲ್ಲಂಘಿಸಿದ್ದಾರೆ ಎಂದಿದ್ದಾರೆ. ಭಾರತದ ಮೇಲೆ ಉಲ್ಟಾ ಆರೋಪ ಮಾಡಿರುವ ಚೀನಾದ ವಿದೇಶಾಂಗ ಇಲಾಖೆ, ಭಾರತೀಯ ಸೇನೆಯ ಜವಾನರು ಚೀನಾ ಗಡಿಯೊಳಗೆ ನುಗ್ಗಿ, ಚೀನಾ ಸೈನಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಒಂದೇ ದಿಕ್ಕಿನಿಂದ ಕ್ರಮ ಕೈಗೊಳ್ಳಬಾರದು ಎಂದು ಇಲಾಖೆ ಹೇಳಿದೆ. ಈ ಘರ್ಷಣೆಯ ಕುರಿತು ವರದಿ ಪ್ರಕಟಿಸಿರುವ ಚೀನಾದ ಸರ್ಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್ ನ ಪ್ರಮುಖ ವರದಿಗಾರ, LAC ಬಳಿ ಐವರು ಚೀನಾ ಜವಾನರು ಸಾವಿಗೀಡಾಗಿದ್ದು, ಒಟ್ಟು 11 ಸೈನಿಕರು ಗಾಯಗೊಂಡಿದ್ದಾರೆ ಎಂದು ಹೇಳಿದೆ.
ಈ ಎಲ್ಲ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿರುವ ಭಾರೀಯ ಸೇನೆ, ಸದ್ಯ ಗಡಿಭಾಗದಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ತಿಳಿಗೊಳಿಸಲು ಉಭಯ ದೇಶಗಳ ಸೇನಾಧಿಕಾರಿಗಳ ನಡುವೆ ದೀರ್ಘಕಾಲದಿಂದ ಮಾತುಕತೆ ಮುಂದುವರೆದಿದೆ ಎಂದು ಹೇಳಿದೆ. ಈ ನಡುವೆ ಸೋಮವಾರ ಗಲವಾನ್ ಕಣಿವೆಯಲ್ಲಿ ರಾತ್ರಿ ಹೊತ್ತು ಡಿ-ಎಸ್ಕಿಲೆಶನ್ ಪ್ರಕ್ರಿಯೆಯ ವೇಳೆ ಎರಡೂ ದೇಶಗಳ ಸೈನಿಕರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದೆ. ಈ ಘರ್ಷಣೆಯಲ್ಲಿ ಭಾರತೀಯ ಸೇನೆಯ ಓರ್ವ ಅಧಿಕಾರಿ ಹಾಗೂ ಇಬ್ಬರು ಜವಾನರು ಹುತಾತ್ಮರಾಗಿದ್ದಾರೆ ಎಂದು ಹೇಳಿದೆ.
ಏಪ್ರಿಲ್ 5ರ ನಂತರ ಗಲವಾನ್ ಕಣಿವೆಯಲ್ಲಿ ಉಭಯದೇಶಗಳ ನಡುವೆ ಉದ್ವಿಗ್ನತೆಯ ವಾತಾವರಣ ಏರ್ಪಟ್ಟಿದೆ. ಚೀನಾ ಸೈನಿಕರು LAC ಉಲ್ಲಂಘಿಸಿ ಭಾರತೀಯ ಗಡಿಯೊಳಗೆ ನುಸುಳಿದ ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಸದ್ಯ ಉಭಯ ದೇಶಗಳು ತನ್ನ ಸಾವಿರಾರು ಸಂಖ್ಯೆಯಲ್ಲಿ ಜವಾನರನ್ನು ಗಡಿಯಲ್ಲಿ ನಿಯೋಜಿಸಿವೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಉಭಯ ದೇಶಗಳ ಸೇನಾಧಿಕಾರಿಗಳ ಮಟ್ಟದ ಮಾತುಕತೆ ಕೂಡ ನಡೆದಿದ್ದು, ಇದುವರೆಗೆ ಯಾವುದೇ ನಿಷ್ಕರ್ಷ ಹೊರಬಂದಿಲ್ಲ.