ವಡೋದರ: ದೇಶದಲ್ಲೀಗ ಟ್ರಾಫಿಕ್ ರೂಲ್ಸ್ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಆಗಿದ್ದು, ಸಂಚಾರಿ ನಿಯಮ ಉಲ್ಲಂಘಿಸಿದವರು ಭಾರೀ ದಂಡ ತೆರಬೇಕಾದ ಸ್ಥಿತಿ ಎದುರಾಗಿದೆ. ಅಷ್ಟೇ ಅಲ್ಲ, ಟ್ರಾಫಿಕ್ ಪೊಲೀಸರು ವಾಹನ ಸವಾರರನ್ನು ತಡೆದು ನಿಗದಿತ ದಾಖಲೆಗಳ ಪರಿಶೀಲನೆ ನಡೆಸಲು ಆರಂಭಿಸಿದ್ದಾರೆ. ಇಂಥ ಒಂದು ಪರಿಸ್ಥಿತಿಯಿಂದ ಪಾರಾಗಲು ಬೈಕ್ ಸವಾರರೊಬ್ಬರು ಉಪಾಯ ಕಂಡುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಗುಜರಾತ್ ಜಿಲ್ಲೆಯ ವಡೋದರದ  ಇನ್ಶ್ಯುರೆನ್ಸ್ ಏಜೆಂಟ್ ಆಗಿರುವ 50 ವರ್ಷದ ರಾಂಪಾಲ್ ಎಂಬುವರು ರಸ್ತೆ ಸಂಚಾರಕ್ಕೆ ಅಗತ್ಯವಾದ ಲೈಸನ್ಸ್, ವಿಮೆ ಸೇರಿದಂತೆ ಮೊದಲಾದ ದಾಖಲೆಗಳನ್ನುಹೆಲ್ಮೆಟ್ ಗೆ ಅಂಟಿಸಿಕೊಂಡು ವಾಹನ ಸಂಚಾರ ಮಾಡುತ್ತಿದ್ದಾರೆ. 


ಈ ಬಗ್ಗೆ ಝೀ ನ್ಯೂಸ್ ಜೊತೆ ಮಾತನಾಡಿರುವ ರಾಂಪಾಲ್, ಜನರು ಪ್ರತಿನಿತ್ಯ ದಾಖಲೆಗಳನ್ನು ಮರೆತು ಬಂದು ಇಲ್ಲಿ ಸಂಚಾರಿ ಪೊಲೀಸರಿಗೆ ದಂಡ ಕಟ್ಟುವುದನ್ನು ನೋಡಿದ್ದೇನೆ. ಹಾಗಾಗಿ ಕಾನೂನು ಪಾಲಿಸಲು ಹಾಗೂ ಪೊಲೀಸರಿಗೆ ದಂಡ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಈ ಪ್ಲಾನ್ ಮಾಡಿರುವುದಾಗಿ ಹೇಳಿದ್ದಾರೆ. ಸದ್ಯ ರಾಂಪಾಲ್ ಅವರ ಹೆಲ್ಮೆಟ್ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಹೆಲ್ಮೆಟ್ ಎಷ್ಟು ಅಗತ್ಯವೋ ಸಂಚಾರ ದಾಖಲೆಗಳೂ ಅಷ್ಟೇ ಮುಖ್ಯ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ.