ಸೌಥಾಂಪ್ಟನ್: ಅಮೆರಿಕ ಹಾಗೂ ಕೆರಿಬಿಯನ್ ಆತಿಥ್ಯದಲ್ಲಿ ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸ ಆರಂಭವಾಗಲಿದ್ದು, ಈ ಸೀಮಿತ ಓವರ್ ಗಳ ಕ್ರಿಕೆಟ್ ಸರಣಿಯಿಂದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಗದ ಬೌಲರ್ ಜಸ್​ಪ್ರೀತ್ ಬುಮ್ರಾ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಬಿಸಿಸಿಐ ಹೇಳಿದೆ. 


COMMERCIAL BREAK
SCROLL TO CONTINUE READING

ವಿಶ್ವಕಪ್ ಪಂದ್ಯದ ಬಳಿಕ ಈ ಸರಣಿಯಿಂದ ವಿಶ್ರಾಂತಿ ಪಡೆಯಲಿರುವ ಕೊಹ್ಲಿ ಮತ್ತು ಬುಮ್ರಾಹ್ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನ ಭಾಗವಾಗಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ತಂಡಕ್ಕೆ ಮರಳಲಿದ್ದಾರೆ. 


'ವಿರಾಟ್ ಕೊಹ್ಲಿ ಹಾಗೂ ಜಸ್​ಪ್ರೀತ್​ಗೆ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯ ವೇಳೆ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ. ವಿರಾಟ್ ಕೊಹ್ಲಿ ಕಳೆದ ಆಸ್ಟ್ರೇಲಿಯಾ ಸರಣಿಯಿಂದ ಆಡುತ್ತಿದ್ದಾರೆ, ಬುಮ್ರಾರ ವರ್ಕ್​ಲೋಡ್ ಮ್ಯಾನೇಜ್​ವೆುಂಟ್ ಮಾಡುವ ಕಾರಣಕ್ಕಾಗಿ ವಿಶ್ರಾಂತಿ ನೀಡಲಿದ್ದೇವೆ. ಟೆಸ್ಟ್ ಸರಣಿಗೂ ಮುನ್ನ ಅವರು ತಂಡವನ್ನು ಕೂಡಿಕೊಳ್ಳಲಿದ್ದಾರೆ' ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. 


ವಿಶ್ವಕಪ್ ಪಂದ್ಯದ ಬಳಿಕ ಇತರ ಆಟಗಾರರಿಗೂ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಒಂದು ವೇಳೆ ಭಾರತ ವಿಶ್ವಕಪ್ ಫೈನಲ್ ಪಂದ್ಯ ತಲುಪಿದ್ದೇ ಆದಲ್ಲಿ ಮುಖ್ಯ ಆಟಗಾರರು ಜುಲೈ 14 ರವರೆಗೆ ತಂಡಕ್ಕೆ ಲಭ್ಯವಿರಬೇಕಾಗುತ್ತದೆ. ಈ ಕಾರಣದಿಂದಾಗಿ ತಂಡದ ಪ್ರಮುಖ ಬ್ಯಾಟ್ಸ್ ಮನ್​ಗಳು ಹಾಗೂ ಬೌಲರ್​ಗಳಿಗೆ ವಿಶ್ರಾಂತಿ ಅಗತ್ಯವಿದೆ ಎಂದು ಬಿಸಿಸಿಐ ಮನಗಂಡಿದೆ.