ಲೋಕಸಭೆಯ ಪ್ರೊಟೆಮ್ ಸ್ಪೀಕರ್ ಆಗಿ ಸಂಸದ ವೀರೇಂದ್ರ ಕುಮಾರ್ ಪ್ರಮಾಣವಚನ ಸ್ವೀಕಾರ
ರಾಷ್ಟ್ರಪತಿ ಭವನದಲ್ಲಿ ವೀರೇಂದ್ರ ಕುಮಾರ್ ಅವರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪ್ರಮಾಣ ವಚನ ಬೋಧಿಸಿದರು.
ನವದೆಹಲಿ: ಮಾಜಿ ಕೇಂದ್ರ ಸಚಿವ ಹಾಗೂ ಏಳು ಬಾರಿ ಸಂಸದರಾಗಿರುವ ವೀರೇಂದ್ರ ಕುಮಾರ್ ಅವರು ಸೋಮವಾರ ಲೋಕಸಭೆಯ ಪ್ರೊಟೆಮ್ ಸ್ಪೀಕರ್ ಅಥವಾ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದಲ್ಲಿ ವೀರೇಂದ್ರ ಕುಮಾರ್ ಅವರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪ್ರಮಾಣ ವಚನ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಈ ಸಂದರ್ಭದಲ್ಲಿ ಹಾಜರಿದ್ದರು.
ಮೊದಲ ಬಾರಿಗೆ 1996ರಲ್ಲಿ 11ನೇ ಲೋಕಸಭೆಗೆ ಸಂಸದರಾಗಿ ಆಯ್ಕೆಯಾದ ವೀರೇಂದ್ರ ಕುಮಾರ್, ಕಾರ್ಮಿಕ ಮತ್ತು ಕಲ್ಯಾಣ ಸ್ಥಾಯಿ ಸಮಿತಿಯ ಸದಸ್ಯರಾದರು. ಬಳಿಕ ನಿರಂತರವಾಗಿ 12, 13, 14, 15, 16 ಮತ್ತು 17 ನೇ ಲೋಕಸಭೆಗೆ ಮರು ಆಯ್ಕೆಯಾದರು. ಈ ಅವಧಿಯಲ್ಲಿ ವಿವಿಧ ಸಮಿತಿಗಳ ಸದಸ್ಯರಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು, ಸೆಪ್ಟೆಂಬರ್ 2017 ರಿಂದ ಮೇ 2019 ರ ವರೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿದ್ದರು.
ಇಂದಿನಿಂದ 17 ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಲಿದ್ದು, ಪ್ರಧಾನಿ, ಕ್ಯಾಬಿನೆಟ್ ಸಚಿವರು ಮತ್ತು ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೊದಲ ಎರಡು ದಿನಗಳು ನೂತನ ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದು, ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಜೂನ್ 19ರಂದು ಚುನಾವಣೆ ನಡೆಯಲಿದೆ. ಜೂನ್ 20ರಂದು ರಾಷ್ಟ್ರಪತಿಗಳು ಸಂಸತ್ತಿನ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.