ನವದೆಹಲಿ: ಟಾಟಾ ಸನ್ಸ್ ಮತ್ತು ಸಿಂಗಾಪುರ್ ಏರ್‌ಲೈನ್ಸ್‌ನ ಜಂಟಿ ಕಾರ್ಯಾಚರಣೆಯೊಂದಿಗೆ ಆಗಸ್ಟ್‌ನಿಂದ ಅಂತಾರಾಷ್ಟ್ರೀಯ ವಿಮಾನ ಯಾನ ಸೇವೆ ಆರಂಭಿಸುವುದಾಗಿ ವಿಸ್ತಾರಾ ಏರ್‌ಲೈನ್ಸ್‌ ಗುರುವಾರ ಪ್ರಕಟಿಸಿದೆ. ನವದೆಹಲಿ ಮತ್ತು ಮುಂಬೈಯಿಂದ ಕ್ರಮವಾಗಿ ಆಗಸ್ಟ್ 6 ಮತ್ತು 7 ರಿಂದ ಸಿಂಗಾಪುರಕ್ಕೆ ಅಂತಾರಾಷ್ಟ್ರೀಯ ವಿಮಾನ ಯಾನ ಸೇವೆ ಪ್ರಾರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


COMMERCIAL BREAK
SCROLL TO CONTINUE READING

ವಿಸ್ತಾರ ವಿಮಾನಯಾನ ಸಂಸ್ಥೆ ಸಿಂಗಪುರಕ್ಕೆ ಪ್ರತಿದಿನ ಎರಡು ವಿಮಾನಗಳನ್ನು ನವದೆಹಲಿ ಮತ್ತು ಮುಂಬೈನಿಂದ ಕಾರ್ಯಾಚರಣೆ ನಡೆಸಲಿದೆ. ಅಮೃತಸರ, ಚಂಡೀಗಢ, ಜಮ್ಮು, ಲಕ್ನೋ, ರಾಂಚಿ, ರಾಯ್‌ಪುರ, ಶ್ರೀನಗರ ಮತ್ತು ವಾರಣಾಸಿಯಂತಹ ಹಲವಾರು ನಗರಗಳಿಗೆ ಗ್ರಾಹಕರು ಒಂದು-ನಿಲುಗಡೆ(One Stop) ಸಂಪರ್ಕವನ್ನು ಪಡೆಯಲು ಸಾಧ್ಯವಾಗುತ್ತದೆ.


ವಿಸ್ತಾರಾ ತನ್ನ ಬೋಯಿಂಗ್ 737-800 ಎನ್‌ಜಿ ವಿಮಾನವನ್ನು ಎರಡು ದರ್ಜೆಯ ಕ್ಯಾಬಿನ್ ಕಾನ್ಫಿಗರೇಶನ್‌ನೊಂದಿಗೆ (ವ್ಯವಹಾರ ಮತ್ತು ಆರ್ಥಿಕತೆ) ಹಾರಿಸಲಿದೆ. ಇದು ತನ್ನ ಅಂತರರಾಷ್ಟ್ರೀಯ ನೆಟ್‌ವರ್ಕ್ ಅನ್ನು ಇತರ ಸ್ಥಳಗಳಿಗೆ ವಿಸ್ತರಿಸಲು ಯೋಜಿಸಿದೆ ಎಂದು ತಿಳಿದುಬಂದಿದೆ.


"ಸಿಂಗಾಪುರವನ್ನು ನಮ್ಮ ಮೊದಲ ಅಂತರರಾಷ್ಟ್ರೀಯ ತಾಣವಾಗಿ ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ಇದು ಕಾರ್ಪೊರೇಟ್, ವ್ಯವಹಾರ ಮತ್ತು ಲೀಜರ್ ಟ್ರಾವೆಲ್ ಸೌಲಭ್ಯ ಒದಗಿಸುವ ಅವಕಾಶಗಳನ್ನು ನೀಡಲಿದೆ" ಎಂದು ವಿಸ್ತಾರಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲೆಸ್ಲಿ ಥಂಗ್ ಹೇಳಿದರು.


"ಸಮಕಾಲೀನ ವಿಧಾನ ಮತ್ತು ವಿಶ್ವ ದರ್ಜೆಯ ಸೇವೆಯೊಂದಿಗೆ ಉತ್ತಮ ಭಾರತೀಯ ಆತಿಥ್ಯವನ್ನು ಬಿಂಬಿಸುವ ಹೊಸ ಸಂಕೇತವನ್ನು ನಾವು ಇಂದು ಜಗತ್ತಿಗೆ ಪ್ರಸ್ತುತಪಡಿಸುತ್ತೇವೆ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.


ದೆಹಲಿಯಲ್ಲಿ ನೆಲೆಗೊಂಡಿರುವ ವಿಸ್ತಾರ ವಿಮಾನಯಾನವು ಪ್ರಸ್ತುತ 24 ದೇಶೀಯ ತಾಣಗಳಿಗೆ ವಿಮಾನ ಯಾನಸೇವೆ ನೀಡುತ್ತಿದೆ. ವಾರಕ್ಕೆ 1,200 ಕ್ಕೂ ಹೆಚ್ಚು ವಿಮಾನಗಳನ್ನು 23 ಏರ್‌ಬಸ್ ಎ 320 ಮತ್ತು ಆರು ಬೋಯಿಂಗ್ 737-800 ಎನ್‌ಜಿ ವಿಮಾನಗಳು ನಿರ್ವಹಿಸುತ್ತದೆ. ಇದು 2015 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಈವರೆಗೂ 15 ದಶಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ವಿಮಾನಯ ಯಾನ ಸೇವೆ ಒದಗಿಸಿದೆ.