ವಿಶ್ವಾಸ ಮತ ಯಾಚನೆಗೆ ಮುಹೂರ್ತ ಫಿಕ್ಸ್: ಗುರುವಾರ ಬೆಳಿಗ್ಗೆ 11 ಗಂಟೆಗೆ ಮೈತ್ರಿ ಸರ್ಕಾರದ ಭವಿಷ್ಯ ನಿರ್ಧಾರ
ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಬೆಳಿಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆಗೆ ನಿರ್ಧರಿಸಿದ್ದಾರೆ.
ಬೆಂಗಳೂರು: ಅವಿಶ್ವಾಸ ಗೊತ್ತುವಳಿ ಮಂಡನೆಗೆ ಬಿಜೆಪಿ ಮನವಿ ಪತ್ರ ಸಲ್ಲಿಸಿದ ಬೆನ್ನಲೇ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಬೆಳಿಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆಗೆ ನಿರ್ಧರಿಸಿದ್ದಾರೆ.
ಇಂದು ನಡೆದ ಸದನ ಕಲಾಪ ಸಮಿತಿ ಸಭೆ ಬಳಿಕ ಸ್ಪೀಕರ್ ಭೇಟಿ ಮಾಡಿದ ಸಿಎಂ, ಗುರುವಾರ ಬೆಳಿಗ್ಗೆ 11 ಗಂಟೆಗೆ ವಿಶ್ವಾಸ ಮತಯಾಚನೆಗೆ ಲಿಖಿತ ರೂಪದಲ್ಲಿ ನೋಟಿಸ್ ಸಲ್ಲಿಸಿದ್ದಾರೆ. ಅತೃಪ್ತ ಶಾಸಕರ ಅರ್ಜಿ, ಸ್ಪೀಕರ್ ಸಲ್ಲಿಸಿದ ಅರ್ಜಿ ಮತ್ತು ರಾಜ್ಯ ಸರಕಾರದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿದ ಬಳಿಕವೇ ವಿಶ್ವಾಸ ಮತ ಯಾಚಿಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದೇ ವೇಳೆ, ನಿಗದಿಯಾಗಿರುವ ವಿಶ್ವಾಸ ಮತ ಯಾಚನೆ ದಿನಾಂಕಕ್ಕೆ ಸಮ್ಮತಿ ಸೂಚಿಸಿರುವ ಬಿಜೆಪಿ, ಅಲ್ಲಿಯವರೆಗೂ ಯಾವುದೇ ಕಲಾಪ ನಡೆಸದಂತೆ ಸ್ಪೀಕರ್ ಬಳಿ ಮನವಿ ಮಾಡಿದೆ.