ಪ್ರಸಕ್ತ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಆರಂಭ
ಮೊದಲ ಹಂತದಲ್ಲಿ 18 ರಾಜ್ಯಗಳ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ 91 ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿರುವ ಮತದಾನ ಸಂಜೆ 6 ಗಂಟೆವರೆಗೆ ನಡೆಯಲಿದೆ.
ನವದೆಹಲಿ: 17 ನೇ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇಂದು ಚಾಲನೆ ದೊರೆತಿದೆ. ಮೊದಲ ಹಂತದಲ್ಲಿ 18 ರಾಜ್ಯಗಳ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ 91 ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿರುವ ಮತದಾನ ಸಂಜೆ 6 ಗಂಟೆವರೆಗೆ ನಡೆಯಲಿದೆ.
91 ಕ್ಷೇತ್ರಗಳಲ್ಲಿ ಒಟ್ಟು 1279 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣಾ ಆಯೋಗವು ಮತದಾನದ ವೇಳೆ ಯಾವುದೇ ತೊಡಕಾಗದಂತೆ ಎಚ್ಚರಿಕೆ ವಹಿಸಿದ್ದು ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನೂ ಕೈಗೊಂಡಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.
ಆಂಧ್ರ ಪ್ರದೇಶ, ತೆಲಂಗಾಣ, ಅರುಣಾಚಲ ಪ್ರದೇಶ, ಮೇಘಾಲಯ, ಉತ್ತರಾಖಂಡ್, ಮಿಜೋರಾಮ್, ನಾಗಾಲೆಂಡ್, ಲಕ್ಷದ್ವೀಪ ಮತ್ತು ಅಂಡಮಾನ್ ನಿಕೋಬಾರ್ ನ ಎಲ್ಲಾ ಕ್ಷೇತ್ರಗಳಿಗೂ ಇಂದು ಒಂದೇ ಹಂತದಲ್ಲಿ ಮತದಾನ ನೆರವೇರಲಿದೆ.
ಅಸ್ಸಾಂ, ಬಿಹಾರ್, ಛತ್ತೀಸ್ಗಡ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಒಡಿಶಾ, ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ತ್ರಿಪುರ ರಾಜ್ಯಗಳ ಕೆಲವು ಕ್ಷೇತ್ರಗಳಿಗೆ ಮಾತ್ರ ಇಂದು ಮತದಾನ ನಡೆಯಲಿದೆ..
ಆಂಧ್ರ ಪ್ರದೇಶದ 175 ವಿಧಾನಸಭಾ ಕ್ಷೇತ್ರಗಳು, 25 ಲೋಕಸಭಾ ಕ್ಷೇತ್ರಗಳು, ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳು, ಸಿಕ್ಕಿಂ ನ 60 ವಿಧಾನಸಭಾ ಕ್ಷೇತ್ರಗಳು ಮತ್ತು ಅರುಣಾಚಲ ಪ್ರದೇಶದ 32 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಇಂದು ಮತದಾನ ನಡೆಯಲಿದೆ.