ಬೆಂಗಳೂರು: ಡಾಕ್ಟರ್ ದಿಶಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಇಂದು ಮುಂಜಾನೆ ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ. ತೆಲಂಗಾಣದಲ್ಲಿ ಮಹಿಳೆಯರ ಮೇಲೆ ಕುಕೃತ್ಯ ಎಸಗುವ ಕಾಮುಕರಿಗೆ ಈ ರೀತಿ ಎನ್‌ಕೌಂಟರ್‌ ಮಾಡಿರುವುದು ಇದು ಎರಡನೇ ಬಾರಿಗೆ. ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕರು ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಎನ್‌ಕೌಂಟರ್‌ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಇದಕ್ಕೂ ಮೊದಲು 2008 ರ ಡಿಸೆಂಬರ್‌ನಲ್ಲಿ ವಾರಂಗಲ್‌ನಲ್ಲೂ ಇದೇ ರೀತಿಯ ಪ್ರಕರಣವೊಂದು ನಡೆದಿತ್ತು. ಪ್ರಕರಣದಲ್ಲಿ ಆರೋಪಿಗಳು ಯುವತಿಯರ ಮೇಲೆ ಆಸಿಡ್ ದಾಳಿ ನಡೆಸಿದ್ದರು. ಪ್ರಕರಣಕ್ಕೆ ಒಂದೆರಡು ದಿನದಲ್ಲೇ ಆರೋಪಿಗಳನ್ನು ಬಂಧಿಸಿದ್ದ ಅಂದಿನ ವಾರಂಗಲ್‌ನ ಎಸ್‌ಪಿ, ಮೂವರು ಆರೋಪಿಗಳನ್ನು ಸ್ಥಳ ಪರಿಶೀಲನೆಗಾಗಿ ಘಟನಾ ಸ್ಥಳಕ್ಕೆ ಕರೆದೊಯ್ದಿದ್ದರು. ಆಗ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದರು. ಆ ಸಂದರ್ಭದಲ್ಲಿ ಹಿಂದೂ ಮುಂದೂ ನೋಡದ ಎಸ್‌ಪಿ ನೇತೃತ್ವದ ತಂಡ ಆರೋಪಿಗಳನ್ನು ಎನ್‌ಕೌಂಟರ್ ಮಾಡಿ ಬಿಸಾಕಿತ್ತು. ವಿಶೇಷವೆಂದರೆ ಈ ಎರಡೂ ಪ್ರಕರಣಗಳಲ್ಲಿ ಪ್ರಸ್ತುತ ಶಂಶಾಬಾದ್‌ನ ಹಾಲಿ ಪೊಲೀಸ್ ಆಯುಕ್ತರಾಗಿರುವ ವಿಶ್ವನಾಥ್ ಸಜ್ಜನರ್ ತಂಡದ ನೇತೃತ್ವ ವಹಿಸಿದ್ದರು. ಸಜ್ಜನರ್ 2008 ರಲ್ಲಿ ವಾರಂಗಲ್‌ನ ಎಸ್‌ಪಿ ಆಗಿದ್ದರು. ಇನ್ನೊಂದು ವಿಶೇಷವೆಂದರೆ ಈ ವಿಶ್ವನಾಥ್ ಸಜ್ಜನರ್(VC Sajjanar)  ನಮ್ಮ 'ವೀರಕನ್ನಡಿಗ'. ವಿಶ್ವನಾಥ್ ಸಜ್ಜನರ್ ಕರ್ನಾಟಕದ ಹುಬ್ಬಳ್ಳಿ ಮೂಲದವರು.


ಗಮನಾರ್ಹವಾಗಿ, ಹೈದರಾಬಾದ್‌ನ ಶಾದ್‌ನಗರದ ಸಮೀಪವಿರುವ ಚಟಾನ್ ಪಲ್ಲಿ ಬ್ರಿಡ್ಜ್ ಬಳಿ ಹೈದರಾಬಾದ್‌ನ ಶಾದ್‌ನಗರದಲ್ಲಿ ಮಹಿಳಾ ಪಶುವೈದ್ಯರ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದ್ದ ನಾಲ್ವರು ಆರೋಪಿಗಳನ್ನು ಸ್ಥಳ ಪರಿಶೀಲನೆಗಾಗಿ ಅತ್ಯಾಚಾರವೆಸಗಿದ್ದ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳು ಪೊಲೀಸರ ಮೇಲೆ ಕಲ್ಲು ತೂರಾಟವನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಎನ್‌ಕೌಂಟರ್‌ ಮಾಡಿದ್ದಾರೆ ಎನ್ನಲಾಗಿದೆ.  ಆರೋಪಿಗಳ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಹಮುದ್‌ನಗರ ಆಸ್ಪತ್ರೆಗೆ ಸಾಗಿಸಲಾಗಿದೆ.


ಈ ಘಟನೆಯ ನಂತರ, ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯ ಜನರ ದೊಡ್ಡ ಗುಂಪು 'ಹೈದರಾಬಾದ್ ಪೊಲೀಸ್ ಜಿಂದಾಬಾದ್', 'ತೆಲಂಗಾಣ ಪೊಲೀಸ್ ಜಿಂದಾಬಾದ್' ಎಂಬ ಘೋಷಣೆಗಳನ್ನು ಮೊಳಗಿಸಿದರು. ಈ ಎನ್‌ಕೌಂಟರ್‌ ಬಳಿಕ ದೇಶಾದ್ಯಂತ ಪೊಲೀಸರಿಗೆ ಬಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. 



ಎನ್‌ಕೌಂಟರ್‌ನಲ್ಲಿ ಆರೋಪಿಗಳನ್ನು ಹತ್ಯೆಗೈದ ಬಗ್ಗೆ ಸಂತ್ರಸ್ತೆಯ ತಂದೆ ಸಂತೋಷ ವ್ಯಕ್ತಪಡಿಸಿದ್ದಾರೆ. ನನ್ನ ಮಗಳು ನಮ್ಮನ್ನಗಲಿ 10 ದಿನಗಳು ಕಳೆದಿವೆ. ಈಗ ತನ್ನ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಇದಕ್ಕಾಗಿ ನಾನು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ. ಅದೇ ಸಮಯದಲ್ಲಿ, ತೆಲಂಗಾಣ ಪೊಲೀಸ್, ತೆಲಂಗಾಣ ಸರ್ಕಾರ ಮತ್ತು ಮಾಧ್ಯಮಗಳಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಸಂತ್ರಸ್ತೆಯ ಸಹೋದರಿ ಹೇಳಿದ್ದಾರೆ.