ನವದೆಹಲಿ: ಇದುವರೆಗೂ ಚಂದ್ರನ ಮೇಲೆ ಯಾರೂ ಕಾಲಿಡದ ಸ್ಥಳದಲ್ಲಿ ಚಂದ್ರಯಾನ-2 ಹೆಜ್ಜೆ ಇಡಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಎಲ್ಲರೂ ಕಾಯುತ್ತಿದ್ದು, ಕುತೂಹಲ ಹೆಚ್ಚಾಗಿದೆ. ಎಲ್ಲವೂ ಅಂದುಕೊಂಡಂತೆಯೇ ಸುಸೂತ್ರವಾಗಿ ನಡೆಯುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ಕೆ.ಶಿವನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಚಂದ್ರಯಾನ್ -2ನ ವಿಕ್ರಮ್ ಲ್ಯಾಂಡರ್ ಶನಿವಾರ ಮುಂಜಾನೆ 1.30 ರಿಂದ 2.30ರ ವೇಳೆಗೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಪಾದಾರ್ಪಣೆ ಮಾಡಲಿದ್ದು, ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ಸುರಕ್ಷಿತ ಮತ್ತು ಯಶಸ್ವಿಯಾಗಿ ಇಳಿಯುವ ಬಗ್ಗೆ ವಿಶ್ವಾಸವಿದೆ ಎಂದು ಶಿವನ್ ಅವರು ಸುದ್ದಿಸಂಸ್ಥೆ ಎಎನ್ಐಗೆ ಹೇಳಿದ್ದಾರೆ.


"ನಾವು ನಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇವೆ, ಇದೀಗ ಇಂದು ರಾತ್ರಿ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಇದು ಒಂದು ಐತಿಹಾಸಿಕ ಘಟನೆಯಾಗಿದೆ. ಏಕೆಂದರೆ ಚಂದ್ರಯಾನ್ -2 ಚಂದ್ರನ ಮೇಲೆ ಪಾದಾರ್ಪಣೆ ಮಾಡುವ ಕ್ಷಣವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಸಹ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ" ಎಂದು ಅವರು ಹೇಳಿದರು. 


ಚಂದ್ರಯಾನ್ 2 ರ ಅಂತಿಮ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಶುಕ್ರವಾರ ತಡರಾತ್ರಿ ಪ್ರಧಾನಿ ಮೋದಿ ಅವರು ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದು,  ದೇಶಾದ್ಯಂತ 60 ಕ್ಕೂ ಹೆಚ್ಚು ಪ್ರೌಢಶಾಲೆಗಳ ವಿದ್ಯಾರ್ಥಿಗಳೊಂದಿಗೆ ಇಸ್ರೋ ವಿಜ್ಞಾನಿಗಳ ಅಪರೂಪದ ಸಾಧನೆಯನ್ನು ವೀಕ್ಷಿಸಲಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಹಲವು ವಾಹಿನಿಗಳು ನೇರ ಪ್ರಸಾರ ಸಹ ಮಾಡುತ್ತಿವೆ.