ಮುಂಬೈ: ನಷ್ಟದಲ್ಲಿರುವ ಜೆಟ್ ಏರ್​ವೇಸ್ ವೈಮಾನಿಕ ಸಂಸ್ಥೆಯ ಸಂಸ್ಥಾಪಕ ಹಾಗೂ ಚೇರ್ಮನ್ ನರೇಶ್ ಗೋಯಲ್ ಸೋಮವಾರ ರಾಜೀನಾಮೆ ನೀಡಿದ್ದಾರೆ. ಅಷ್ಟೇಯಲ್ಲದೆ ನರೇಶ್ ಗೋಯಲ್ ಮತ್ತವರ ಪತ್ನಿ ಅನಿತಾ ಸಂಸ್ಥೆಯ ಮಂಡಳಿಯಿಂದಲೂ ಹೊರಬಂದಿದ್ದಾರೆ. 


COMMERCIAL BREAK
SCROLL TO CONTINUE READING

ಜೆಟ್ ಏರ್​ವೇಸ್ ರಕ್ಷಣೆಗಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ಧ. ಜೆಟ್ ಏರ್​ವೇಸ್ 22,000 ಕುಟುಂಬಗಳ ಹಿತ ರಕ್ಷಣೆಗಿಂತ ತಮಗೆ ಯಾವುದೂ ದೊಡ್ಡದಲ್ಲ ಎಂದು ಅವರು ಸೋಮವಾರ ತಿಳಿಸಿದ್ದಾರೆ.


ಜೆಟ್ ಏರ್ ವೇಸ್  ಸಂಸ್ಥೆಯಲ್ಲಿ ಶೇಕಡ 51ರಷ್ಟಿದ್ದ ನರೇಶ್ ಗೋಯಲ್ ಶೇರು ಪ್ರಮಾಣವನ್ನು ಈಗ ಕಡಿಮೆ ಮಾಡಲಾಗಿದೆ. ಈ ಮೂಲಕ ತಾವೇ ಹುಟ್ಟುಹಾಕಿದ ಜೆಟ್ ಏರ್​ವೇಸ್ ಸಂಸ್ಥೆಯಲ್ಲಿ ನರೇಶ್ ಗೋಯೆಲ್ ಅಧಿಕಾರ ಮೊಟಕುಗೊಂಡಂತಾಗಿದೆ.


1992ರಲ್ಲಿ ನರೇಶ್ ಗೋಯಲ್ ಮತ್ತವರ ಪತ್ನಿ ಅನಿತಾ ಅವರು ಜೆಟ್ ಏರ್​ವೇಸ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಇದೀಗ ನರೇಶ್ ಗೋಯಲ್ ಅವರ ನಿರ್ಗಮನದ ನಂತರ ಕಂಪನಿಯ ಆಡಳಿತ ಮಂಡಳಿಯಲ್ಲಿ ಸಿಇಓ ವಿನಯ್ ದುಬೇ ಮುಂದುವರಿಯಲಿದ್ದಾರೆ. ಸಂಸ್ಥೆಯ ಮುಂದಿನ ದಿಕ್ಕುದೆಶೆ ವಿಚಾರದಲ್ಲಿ ವಿನಯ್ ದುಬೇ ಅವರೇ ನಿರ್ಧಾರ ಕೈಗೊಳ್ಳಲಿದ್ದಾರೆ.


ಜೆಟ್ ಏರ್​ವೇಸ್ ಸಂಸ್ಥೆ ಹೆಚ್ಚೂ ಕಡಿಮೆ ಒಯ ಬಿಲಿಯನ್ ಡಾಲರ್ (ಸುಮಾರು 7 ಸಾವಿರ ಕೋಟಿ ರೂಪಾಯಿ) ಸಾಲ ಮಾಡಿಕೊಂಡಿದೆ. ಸಾಲಗಾರರಿಗೆ ಹಣದ ಕಂತು ಕಟ್ಟಲು, ಪೈಲಟ್​ಗಳಿಗೆ ಸಂಬಳ ನೀಡಲು ಹಣವಿಲ್ಲದೆ ಪರದಾಡುತ್ತಿರುವ ಸಂಸ್ಥೆಯು ಇತ್ತೀಚೆಗಷ್ಟೇ 40 ವಿಮಾನಗಳ ಸೇವೆ ಸ್ಥಗಿತಗೊಳಿಸಿತ್ತು. 


ಇಷ್ಟೊಂದು ಸಾಲ ಹೊಂದಿರುವ ಜೆಟ್ ಏರ್​ವೇಸ್ ಸಂಸ್ಥೆಯ ಮೇಲೆ ಈಗ ಯಾರು ಬಂಡವಾಳ ಹಾಕುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಹಿಂದೆ 2013ರಲ್ಲಿ ಇಂಥದ್ದೇ ಪರಿಸ್ಥಿತಿ ಜೆಟ್ ಏರ್ ರ್ವಸ್​ಗೆ ಎದುರಾಗಿದ್ದಾಗ ಅಬುಧಾಬಿಯ ಎಟಿಹಾದ್ ಏರ್​ವೇಸ್ ಸಂಸ್ಥೆಯು ಶೇ. 24ರಷ್ಟು ಪಾಲನ್ನು 600 ಮಿಲಿಯನ್ ಡಾಲರ್ (ಸುಮಾರು 4 ಸಾವಿರ ಕೋಟಿ ರೂಪಾಯಿ) ಹಣ ಕೊಟ್ಟು ಖರೀದಿ ಮಾಡಿ ಬಚಾವ್ ಮಾಡಿತ್ತು. 


ಇದೀಗ ಜೆಟ್ ಏರ್​ವೇಸ್ ಸಂಸ್ಥೆಗೆ ಸಾಲ ಕೊಟ್ಟಿರುವ ಬ್ಯಾಂಕು ಮೊದಲಾದ ಹಣಕಾಸು ಸಂಸ್ಥೆಗಳು ನರೇಶ್ ಗೋಯಲ್ ಅವರ ಎಲ್ಲಾ ಪಾಲನ್ನೂ ವಶಕ್ಕೆ ಪಡೆದುಕೊಳ್ಳಲಿದ್ದಾರೆ. ಇದಾದ ನಂತರ ಸಂಸ್ಥೆಯನ್ನು ಮಾರಾಟಕ್ಕಿಡಲಾಗುತ್ತದೆ ಎಂಬ ಮಾಹಿತಿಗಳಿವೆ.