ನಮ್ಮ ಪಕ್ಷದಲ್ಲಿ ಕಳ್ಳರನ್ನು ನಾವು ಬಯಸುವುದಿಲ್ಲ: ಮಮತಾ ಬ್ಯಾನರ್ಜಿ
ಟಿಎಂಸಿ ದುರ್ಬಲ ಪಕ್ಷವಲ್ಲ. ಹಣ ಪಡೆದು 15-20 ಕೌನ್ಸಿಲರ್‌ಗಳು ಪಕ್ಷವನ್ನು ತೊರೆದ ಕೂಡಲೇ ನಾನೇನು ಹೆದರುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೋಲ್ಕತಾ: 12 ಟಿಎಂಸಿ ಕೌನ್ಸಿಲರ್‌ಗಳು ಮತ್ತು ಶಾಸಕ ಸುನಿಲ್ ಸಿಂಗ್ ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷದಲ್ಲಿ ಕಳ್ಳರನ್ನು ಬಯಸುವುದಿಲ್ಲ ಎಂದು ಮಂಗಳವಾರ ಗುಡುಗಿದರು.
ಇಂದಿಲ್ಲಿ ನಡೆದ ತೃಣಮೂಲ ಕಾಂಗ್ರೆಸ್ ಕೌನ್ಸಿಲರುಗಳ ಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, "ಟಿಎಂಸಿ ದುರ್ಬಲ ಪಕ್ಷವಲ್ಲ. ಹಣ ಪಡೆದು 15-20 ಕೌನ್ಸಿಲರ್‌ಗಳು ಪಕ್ಷವನ್ನು ತೊರೆದ ಕೂಡಲೇ ನಾನೇನು ಹೆದರುವುದಿಲ್ಲ. ಪಕ್ಷದ ಶಾಸಕರು ಪಕ್ಷವನ್ನು ತೊರೆಯಲು ಬಯಸಿದರೆ, ಅವರು ಖಂಡಿತಾ ಹೋಗಬಹುದು. ನಮ್ಮ ಪಕ್ಷದಲ್ಲಿ ಕಳ್ಳರು ಇರುವುದನ್ನು ನಾವು ಬಯಸುವುದಿಲ್ಲ. ಒಬ್ಬ ವ್ಯಕ್ತಿ ಪಕ್ಷ ತೊರೆದರೆ ಅಂತಹ 500 ಜನರನ್ನು ನಾನು ಸಿದ್ಧಗೊಳಿಸುತ್ತೇನೆ" ಎಂದು ಹೇಳಿದರು.
ನವದೆಹಲಿಯಲ್ಲಿ ಸೋಮವಾರ ತೃಣಮೂಲ ಕಾಂಗ್ರೆಸ್‍ನ ಶಾಸಕ ಸುನೀಲ್ ಸಿಂಗ್ ಹಾಗೂ 15 ಕೌನ್ಸಿಲರ್ ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಯ ಪಶ್ಚಿಮ ಬಂಗಾಳ ಉಸ್ತುವಾರಿ ಕೈಲಾಶ್ ವಿಜಯವರ್ಗೀ ಮತ್ತು ಮುಕುಲ್ ರಾಯ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ್ದ ವಿಜಯವರ್ಗಿಯಾ ಅವರು, "ಟಿಎಂಸಿ ಪಕ್ಷದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಸೇರುತ್ತಿದ್ದಾರೆ. ಮಮತಾ ಬ್ಯಾನರ್ಜಿ ಹಿಂಸಾಚಾರವನ್ನು ಪ್ರಚಾರ ಮಾಡುವ ಮೂಲಕ ಪಶ್ಚಿಮ ಬಂಗಾಳದ ಶಾಂತಿ ಇಲ್ಲದಂತಾಗಿದೆ... ಅದಕ್ಕಾಗಿಯೇ ಅವರ ಪಕ್ಷದ ಸದಸ್ಯರು ಈಗ ನಮ್ಮ ಪಕ್ಷಕ್ಕೆ ಸೇರುತ್ತಿದ್ದಾರೆ" ಎಂದು ಹೇಳಿದ್ದರು.