ಚಂದ್ರಯಾನ-2 ರ ವಿಕ್ರಮ್ ಲ್ಯಾಂಡರ್ ಇರುವ ಸ್ಥಳ ಪತ್ತೆ- ಇಸ್ರೋ
ಚಂದ್ರನ ಮೇಲ್ಮೈಗಿಂತ 2.1 ಕಿ.ಮೀ ದೂರದಲ್ಲಿದ್ದಾಗ ಬಾಹ್ಯಾಕಾಶ ಏಜೆನ್ಸಿಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿರುವ ಚಂದ್ರಯಾನ-2 ರ ವಿಕ್ರಮ್ ಲ್ಯಾಂಡರ್ ಇರುವ ಸ್ಥಳ ಪತ್ತೆಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಕೆ.ಶಿವನ್ ಭಾನುವಾರ ಹೇಳಿದ್ದಾರೆ.
ನವದೆಹಲಿ: ಚಂದ್ರನ ಮೇಲ್ಮೈಗಿಂತ 2.1 ಕಿ.ಮೀ ದೂರದಲ್ಲಿದ್ದಾಗ ಬಾಹ್ಯಾಕಾಶ ಏಜೆನ್ಸಿಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿರುವ ಚಂದ್ರಯಾನ-2 ರ ವಿಕ್ರಮ್ ಲ್ಯಾಂಡರ್ ಇರುವ ಸ್ಥಳ ಪತ್ತೆಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಕೆ.ಶಿವನ್ ಭಾನುವಾರ ಹೇಳಿದ್ದಾರೆ.
ಆದಾಗ್ಯೂ, ವಿಕ್ರಮ್ ಲ್ಯಾಂಡರ್ ಅವರೊಂದಿಗೆ ಸಂವಹನ ಇನ್ನೂ ಸಾಧ್ಯವಾಗಿಲ್ಲ ಎಂದು ಇಸ್ರೋ ಮುಖ್ಯಸ್ಥರು ಹೇಳಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
'ನಾವು ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್ನ ಸ್ಥಳವನ್ನು ಕಂಡುಕೊಂಡಿದ್ದೇವೆ ಮತ್ತು ಆರ್ಬಿಟರ್ ಲ್ಯಾಂಡರ್ನ ಥರ್ಮಲ್ ಚಿತ್ರವನ್ನು ಕ್ಲಿಕ್ ಮಾಡಿದೆ. ಆದರೆ ಇನ್ನೂ ಯಾವುದೇ ಸಂಪರ್ಕವಾಗಿಲ್ಲ, ಇದಕ್ಕಾಗಿ ನಾವು ಪ್ರಯತ್ನಿಸುತ್ತಿದ್ದೇವೆ . ಇದು ಶೀಘ್ರದಲ್ಲೇ ಸಾಧ್ಯವಾಗಲಿದೆ ಎಂದು ಶಿವನ್ ವಿಶ್ವಾಸ ವ್ಯಕ್ತಪಡಿಸಿದರು. ವಿಕ್ರಮ ಲ್ಯಾಂಡರ್ ಸಂಪರ್ಕ ಕಡಿತಗೊಂಡ ನಂತರ ಅದನ್ನು ಮುಂದಿನ 14 ದಿನಗಳವರೆಗೆ ಸಂಪರ್ಕಿಸುವ ಯತ್ನ ಮುಂದುವರೆಯಲಿದೆ ಎಂದು ಶಿವನ್ ಶನಿವಾರ ಹೇಳಿದ್ದರು.
ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಶಿವನ್ 'ಕೊನೆಯ ಭಾಗವನ್ನು ಸರಿಯಾದ ರೀತಿಯಲ್ಲಿ ಕಾರ್ಯಗತಗೊಳಿಸಲಾಗಿಲ್ಲ, ಆ ಹಂತದಲ್ಲಿ ಮಾತ್ರ ನಾವು ಲ್ಯಾಂಡರ್‌ನೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದ್ದೇವೆ. ಮುಂದಿನ 14 ದಿನಗಳವರೆಗೆ ಲಿಂಕ್ ಅನ್ನು ಸ್ಥಾಪಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು. ಅಷ್ಟೇ ಅಲ್ಲದೆ ಈಗಾಗಲೇ ಚಂದ್ರಯಾನ 2 ಯೋಜನೆ ಉದ್ದೇಶ 90 ರಿಂದ 95 ರಷ್ಟು ಸಾಧಿಸಲಾಗಿದೆ ಎಂದು ಅವರು ಹೇಳಿದರು.
ಇನ್ನೊಂದೆಡೆ ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ನ್ನು ಇರಿಸಲು ಯತ್ನಿಸಿದ ಪ್ರಯತ್ನಕ್ಕೆ ಅಮೆರಿಕಾದ ನಾಸಾ ಶ್ಲಾಘಿಸಿದೆ.'ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ್ 2 ಅನ್ನು ಇಳಿಸುವ ಇಸ್ರೋ ಪ್ರಯತ್ನವನ್ನು ನಾವು ಪ್ರಶಂಸಿಸುತ್ತೇವೆ. ನಿಮ್ಮ ಪ್ರಯಾಣದಿಂದ ನಮಗೆ ಸ್ಫೂರ್ತಿ ನೀಡಿದ್ದೀರಿ ಮತ್ತು ಸೌರಮಂಡಲವನ್ನು ಒಟ್ಟಾಗಿ ಅನ್ವೇಷಿಸಲು ಭವಿಷ್ಯದ ಅವಕಾಶಗಳನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ನಾಸಾ ಟ್ವೀಟ್ ಮಾಡಿತ್ತು.