ಪ್ರಧಾನಿ ಮೋದಿ ವಿರುದ್ಧ ಬೆರಳು ತೋರಿಸಿದವರ ಕೈ ಕತ್ತರಿಸುತ್ತೇವೆ: ಸತ್ಪಾಲ್ ಸಿಂಗ್
ಪ್ರಧಾನಿ ಮೋದಿ ಕಡೆ ಬೆರಳು ಮಾಡಿ ತೋರಿಸಿದವರ ಕೈ ಕತ್ತರಿಸುತ್ತೇವೆ ಎಂದು ಹೇಳುವ ಮೂಲಕ ಸತ್ಪಾಲ್ ಸಿಂಗ್ ಮತ್ತೊಮ್ಮೆ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ.
ಶಿಮ್ಲಾ: ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅವಾಚ್ಯ ಶಬ್ದ ಬಳಸಿ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದ ಹಿಮಾಚಲ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಸತ್ಪಾಲ್ ಸಿಂಗ್ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂದಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಮ್ ಸ್ವರೂಪ್ ಪರವಾಗಿ ಪ್ರಚಾರ ಭಾಷಣ ಮಾಡುವ ಸಂದರ್ಭದಲ್ಲಿ "ಪ್ರಧಾನಿ ಮೋದಿ ಕಡೆ ಬೆರಳು ಮಾಡಿ ತೋರಿಸಿದವರ ಕೈ ಕತ್ತರಿಸುತ್ತೇವೆ" ಎಂದು ಹೇಳುವ ಮೂಲಕ ಸತ್ಪಾಲ್ ಸಿಂಗ್ ಮತ್ತೊಮ್ಮೆ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಅಲ್ಲದೆ, ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಿದ್ದಾರೆ ಎಂದೂ ಸಹ ಸತ್ಪಾಲ್ ಆರೋಪಿಸಿದ್ದಾರೆ.
ರಾಹುಲ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಶುಕ್ರವಾರದಂದು ಚುನಾವಣಾ ಆಯೋಗ, ಸತ್ತಿಗೆ 48 ಗಂಟೆಗಳ ಕಾಲ ಪ್ರಚಾರ ಮಾಡದಂತೆ, ಸಾರ್ವಜನಿಕ ಸಭೆಗಳಲ್ಲಿ ಮಾತನಾಡದಂತೆ ಶಿಕ್ಷೆ ವಿಧಿಸಿತ್ತು. ಇದಾಗಿ 5 ದಿನಗಳೂ ಕಳೆದಿಲ್ಲ. ಮತ್ತೆ ಪ್ರಚೋದನಾಕಾರಿ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದಾರೆ.