ನವದೆಹಲಿ: ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ಮನಮೋಹನ್ ಸಿಂಗ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ನಾಯಕತ್ವದ ಮೂಲಕ ದೇಶದ ಅಭಿವೃದ್ದಿಯಲ್ಲಿ ಐತಿಹಾಸಿಕ ಪಾತ್ರವನ್ನು ನಿರ್ವಹಿಸುತ್ತೇವೆ ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

ಇದೇ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಪ್ರಸ್ತುತ ಮೋದಿ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡುತ್ತಾ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.


"ಮೋದಿಯವರು ಅಧಿಕಾರಕ್ಕೆ ಬರುವ ಮೊದಲು ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು,ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ಆಶ್ವಾಸನೆ ನೀಡಿದ್ದರು ಆದರೆ ಅವೆಲ್ಲವುಗಳು ಕೂಡಾ ಈಗ ಹುಸಿಯಾಗಿವೆ.ಭಾರತವು ಹಲವು ಸವಾಲುಗಳೊಂದಿದೆ ಕವಲು ಹಾದಿಯಲ್ಲಿ ನಿಂತಿದೆ. ಇಂತಹ ಸವಾಲುಗಳನ್ನು ಎದುರಿಸಲು ಕಾಂಗ್ರೆಸ್ ನ ಮಹಾಧಿವೇಶನ ಹೊಸ ರೂಪುರೇಷೆಗಳ ಮೂಲಕ ಪರಿಹಾರದ ಮಾರ್ಗಗಳನ್ನು ಕಂಡುಕೊಳ್ಳಲಿದೆ" ಎಂದರು. 


ಇದೇ ವೇಳೆ ಕಾಶ್ಮೀರದ ಸಮಸ್ಯೆಯನ್ನು ಪ್ರಸ್ತಾಪಿಸಿದ ಸಿಂಗ್ " ಭಾರತವು ನೆರೆಹೊರೆಯ ಪ್ರದೇಶದಲ್ಲಿ ಸೌಹಾರ್ಧ ವಾತಾವರಣವನ್ನು ಸೃಷ್ಟಿಸಬೇಕಾಗಿದೆ. ಇದಕ್ಕೆ ದ್ವೇಷವು ಎಂದಿಗೂ ತರವಲ್ಲ, ಭಯೋತ್ಪಾಧನೆ ಸ್ವೀಕಾರ್ಹವಲ್ಲದಿದ್ದರೂ ಪಾಕಿಸ್ತಾನವನ್ನು ನಾವು ನೆರೆಯ ದೇಶ ಎನ್ನುವುದನ್ನು ಮರೆಯಬಾರದು.ಆದ್ದರಿಂದ ನಾವು ಭಯೋತ್ಪಾಧನೆಯು ಉಪಖಂಡದ ಶಾಂತಿಗೆ ಧಕ್ಕೆಯನ್ನುಂಟುಮಾಡುತ್ತದೆ ಎನ್ನುವುದನ್ನು ನಾವು ಪಾಕಿಸ್ತಾನಕ್ಕೆ ಎಚ್ಚರಿಸಬೇಕಿದೆ" ಎಂದರು. ಆದರೆ ಕಾಶ್ಮೀರದ ವಿಷಯವನ್ನು ನಿರ್ವಹಿಸುವುದರಲ್ಲಿ ಮೋದಿ ಸರ್ಕಾರವು ವಿಫಲವಾಗಿದೆ ಎಂದು ಸಿಂಗ್ ದೂರಿದರು.


ಇನ್ನು ಮುಂದುವರೆದ ಮಾತನಾಡಿದ ಅವರು "ಕಾಂಗ್ರೆಸ್ ಪಕ್ಷವು ಸ್ವಾತಂತ್ರ ಹೋರಾಟವನ್ನು ಮುನ್ನಡೆಸಿದೆ ಮತ್ತು ಸ್ವಾತಂತ್ರದ ನಂತರ ಭಾರತದ ಅಭಿವೃದ್ದಿಗೆ ಮಾರ್ಗದರ್ಶನ ಮಾಡಿದೆ. ಈಗ ಮತ್ತೆ ಅಂತಹ ಅಭಿವೃದ್ದಿಯ ಪಾತ್ರವಹಿಸುವ ಜವಾಬ್ದಾರಿ ಪಕ್ಷಕ್ಕೆ ಬಂದಿದೆ. ನನಗೆ ಸಂಪೂರ್ಣ ವಿಶ್ವಾಸವಿದೆ ಮುಂಬರುವ ದಿನಗಳಲ್ಲಿ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ನಾವು ಮತ್ತೆ ಐತಿಹಾಸಿಕ ಪಾತ್ರವನ್ನು ನಿರ್ವಹಿಸುತ್ತೇವೆ" ಎಂದು ಮನಮೋಹನ್ ಸಿಂಗ್ ತಿಳಿಸಿದರು.